#SaveNorthKarnataka : ನೆಟ್ಟಿಗರಿಂದ ಹೊಸ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.27- ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಸೇವ್ ಉತ್ತರ ಕರ್ನಾಟಕ ಅಭಿಯಾನ ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಅತ್ಯಂತ ಪ್ರಭಾವಿ ಮಾಧ್ಯಮವಾಗಿದ್ದು, ರೈಲ್ವೆ ನಿಲ್ದಾಣದಲ್ಲಿ ಹೊಟ್ಟೆಪಾಡಿಗಾಗಿ ಹಾಡುತ್ತಿದ್ದ ರಾನು ಮಂಡಲ್ ಅವರನ್ನು ದಿನ ಬೆಳಗಾಗುವುದರೊಳಗೆ ಸೆಲೆಬ್ರಿಟಿ ಹಾಡುಗಾರ್ತಿಯನ್ನಾಗಿ ಮಾಡಿದೆ.

ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ಮಾಡಿದ ಪೊಲೀಸ್ ಪೇದೆ ಪರವಾಗಿ ಇಡೀ ಇಲಾಖೆ ಅಧಿಕಾರಿಗಳು ನಿಂತರೂ ಸಾಮಾಜಿಕ ಜಾಲತಾಣ ಪೇದೆಯ ನೀರಿಳಿಸುವಲ್ಲಿ ಯಶಸ್ವಿಯಾಯಿತು.
ಈ ರೀತಿ ಹಲವಾರು ಕ್ಷಿಪ್ರ ಬೆಳವಣಿಗೆಗಳಿಗೆ ಕಾರಣವಾಗಿ ರುವ ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಸೇವ್ ಉತ್ತರ ಕರ್ನಾಟಕ ಅಭಿಯಾನ ಶುರುವಾಗಿದೆ.

ನೆರೆಯಿಂದಾಗಿ 22 ಜಿಲ್ಲೆಗಳ 103 ತಾಲೂಕುಗಳು ಸಂಕಷ್ಟಕ್ಕೊಳಗಾಗಿವೆ. 50ಸಾವಿರಕ್ಕೂ ಹೆಚ್ಚು ಮನೆಗಳು ಬಿದ್ದು ಹೋಗಿವೆ.ಸಾವಿರಾರು ಕಿಲೋಮೀಟರ್ ರಸ್ತೆ, ನೂರಾರು ಸೇತುವೆಗಳು ಕೊಚ್ಚಿ ಹೋಗಿವೆ. ಸುಮಾರು 5ಲಕ್ಷ ಎಕರೆಗೂ ಹೆಚ್ಚು ಭೂಮಿಯಲ್ಲಿ ಬೆಳೆ ನಷ್ಟವಾಗಿದೆ. ನೆರೆ ಪ್ರದೇಶಗಳವರ ಬದುಕು ಬೀದಿಗೆ ಬಿದ್ದಿದೆ. ಬಹಳಷ್ಟು ಮಂದಿ ಮನೆಯಿಲ್ಲದೆ. ಬೀದಿಯಲ್ಲಿ ಮಲಗುತ್ತಿದ್ದಾರೆ.

ಇವರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರದಿಂದ ಈವರೆಗೆ ಸೂಕ್ತವಾದ ಆರ್ಥಿಕ ನೆರವು ಸಿಕ್ಕಿಲ್ಲ, ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 1500ಕೋಟಿ ರೂ. ಯಾವುದಕ್ಕೂ ಸಾಲುತ್ತಿಲ್ಲ, ನೆರೆ ಸಂತ್ರಸ್ತರ ಪುನರ್ವಸತಿಗಾಗಿ ರಾಜ್ಯ ಸರ್ಕಾರ ಸಾರ್ವಜನಿಕರಿಂದ, ಖಾಸಗಿ ಕಂಪನಿಗಳಿಂದ ದೇಣಿಗೆ ಸಂಗ್ರಹಿಸಿ, ಹಲವಾರು ಇಲಾಖೆಗಳ ಅನುದಾನ ಕಡಿತ ಮಾಡಿ ಪುನರ್ವಸತಿ ಕಾರ್ಯಕ್ಕೆ ನೀಡಲಾಗುತ್ತಿದೆ. ಇದರಿಂದಾಗಿ ರಾಜ್ಯದ ಅಭಿವೃದ್ಧಿಗೂ ಪೆಟ್ಟು ಬಿದ್ದಿದೆ.

ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ದಿಢೀರ್ ಅಭಿಯಾನ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಹ್ಯಾಶ್ ಟ್ಯಾಗ್ ಬಳಸಿ ಸೇವ್ ಉತ್ತರ ಕರ್ನಾಟಕ ಟ್ಯಾಗ್ ಲೈನ್‍ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬಹಳಷ್ಟು ಮಂದಿ ಕಠಿಣ ಶಬ್ಧಗಳಲ್ಲಿ ಟೀಕೆ ಮಾಡಿದರೆ. ಇನ್ನೂ ಕೆಲವರು ನಯವಾದ ಮಾತುಗಳಲ್ಲೇ ಕೇಂದ್ರಕ್ಕೆ ಮನವಿ ಮಾಡುತ್ತಿದ್ದಾರೆ. ದಿಢೀರ್ ಆರಂಭಗೊಂಡಿರುವ ಈ ಅಭಿಯಾನದಲ್ಲಿ ಒಂದು ಕಾಲದಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ನೆಟ್ಟಿಗರೇ ಭಾಗವಹಿಸುತ್ತಿರುವುದು ಗಮನೀಯ ಅಂಶ. ಮೋದಿಯವರೇ ಅನುದಾನ ಕೊಡಿ. ಉತ್ತರ ಕರ್ನಾಟಕ ರಕ್ಷಣೆ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಒತ್ತಾಯಗಳು ಕೇಳಿ ಬರುತ್ತಿವೆ.

Facebook Comments