ಎಸ್‌ಸಿ-ಎಸ್‌ಟಿ ಮೀಸಲಿಟ್ಟ ಹಣ ನೆರೆ ಪರಿಹಾರಕ್ಕೆ ಬೇಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.16- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ (ಎಸ್ಸಿ-ಎಸ್ಟಿ )ವರ್ಗಗಳ ಕಲ್ಯಾಣಕ್ಕೆ ಮೀಸಲಿಟ್ಟಿರುವ ಎಸ್‍ಸಿಟಿ/ಟಿಎಸ್‍ಪಿ ಹಣವನ್ನು ಯಾವುದೇ ಕಾರಣಕ್ಕೂ ನೆರೆ ಸಂತ್ರಸ್ತರಿಗೆ ಬಳಕೆ ಮಾಡಬಾರದೆಂದು ದಲಿತ ಸಂಘಟನೆಗಳ ಒಕ್ಕೂಟ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ.

ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ವೆ.ಮು.ವೆಂಕಟಸ್ವಾಮಿ, ಜೈಭೀಮ್ ದಳದ ವೈ.ಎಸ್.ದೇವೂರ್, ರಿಪಬ್ಲಿಕ್ ಸೇನೆಯ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಸೇರಿದಂತೆ ಮತ್ತಿತರರ ನಿಯೋಗವು ಯಾವುದೇ ಕಾರಣಕ್ಕೂ ಎಸ್‍ಸಿಟಿ/ಟಿಎಸ್‍ಪಿ ಹಣವನ್ನು ನೆರೆ ಸಂತ್ರಸ್ತರಿಗೆ ಬಳಸದಂತೆ ಅಧಿಕಾರಿಗಳಿಗೆ ಸೂಚನೆ ಕೊಡಬೇಕೆಂದು ಮನವಿ ಮಾಡಿತು.

ರಾಜ್ಯ ಸರ್ಕಾರದ ಮುಂದೆ ಇಂತಹ ಯಾವುದೇ ಪ್ರಸ್ತಾವನೆ ಇಲ್ಲ. ಒಂದು ವೇಳೆ ಎಸ್ಸಿ-ಎಸ್ಟಿ ಕಲ್ಯಾಣಕ್ಕಾಗಿ ಮೀಸಲಿಟ್ಟ ಎಸ್‍ಸಿಟಿ/ಟಿಎಸ್‍ಪಿ ಅನುದಾನವನ್ನು ನೆರೆ ಸಂತ್ರಸ್ತರಿಗೆ ಬಳಸಲು ನಿರ್ಧರಿಸಿದ್ದರೆ ತಕ್ಷಣವೆ ಇದನ್ನು ಕೈಬಿಡಬೇಕೆಂದು ಸೂಚಿಸುವುದಾಗಿ ನಿಯೋಗಕ್ಕೆ ಭರವಸೆ ಕೊಟ್ಟರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ವೇ.ಮು. ವೆಂಕಟಸ್ವಾಮಿ, ನಿಯಮಗಳ ಪ್ರಕಾರ ಈ ಹಣವನ್ನು ಎಸ್ಸಿಎಸ್ಟಿ ಕಲ್ಯಾಣಕ್ಕೆ ಹೊರತುಪಡಿಸಿದರೆ ಬೇರೆ ಯಾವುದೇ ಕಾರ್ಯಗಳಿಗೂ ಬಳಕೆ ಮಾಡುವಂತಿಲ್ಲ. ಇತ್ತೀಚೆಗೆ ಡಿಸಿಎಂ ಆಗಿರುವ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ನೆರೆ ಸಂತ್ರಸ್ತರಿಗೆ ಎಸ್‍ಸಿಟಿ/ಟಿಎಸ್‍ಪಿ ಹಣವನ್ನು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಬಳಕೆ ಮಾಡಿದರೆ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಈ ಸಂಬಂಧ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

Facebook Comments