9 ತಿಂಗಳ ಬಳಿಕ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲರವ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.1- ಕೊರೊನಾ ಹಿನ್ನೆಲೆಯಲ್ಲಿ ಕಳೆದ ಒಂಭತ್ತು ತಿಂಗಳಿನಿಂದ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳು ಇಂದಿನಿಂದ ಆರಂಭವಾಗಿದ್ದು, ಮೊದಲ ದಿನವಾದ ಇಂದು ಮಕ್ಕಳು ಲವಲವಿಕೆಯಿಂದಲೇ ಶಾಲಾ-ಕಾಲೇಜುಗಳಿಗೆ ಆಗಮಿಸುತ್ತಿದ್ದುದು ಕಂಡುಬಂತು. ಕೋವಿಡ್-19 ಮಾರ್ಗಸೂಚಿ ಮೇರೆಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ರಾಜ್ಯಾದ್ಯಂತ ಇಂದಿನಿಂದ ಆರಂಭವಾದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬ್ರಿಟನ್‍ನ ರೂಪಾಂತರಗೊಂಡ ಕೊರೊನಾ ಭೀತಿ ನಡುವೆಯೂ ಸರ್ಕಾರದ ಸಾಕಷ್ಟು ಜಾಗೃತಿ, ಅಗತ್ಯ ಮುನ್ನೆಚ್ಚರಿಕೆ ನಡುವೆ ಶಾಲಾ-ಕಾಲೇಜುಗಳು ಆರಂಭವಾದವು. ರಾಜ್ಯಾದ್ಯಂತ ವಿದ್ಯಾಗಮ ತರಗತಿಗಳನ್ನು ಪ್ರಾರಂಭಿಸಲಾಯಿತು.  ಪೋಷಕರೇ ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ.

ಶಾಲಾ-ಕಾಲೇಜುಗಳಲ್ಲ, ಇವು ಸುರಕ್ಷತಾ ಕೇಂದ್ರಗಳೆಂದು ಭಾವಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ , ಶಿಕ್ಷಣ ಸಚಿವ ಸುರೇಶ್‍ಕುಮಾರ್, ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟ ಭರವಸೆ ನೀಡಿ ಪೋಷಕರಿಗೆ ಅಭಯ ನೀಡಿರುವುದರಿಂದ ಹಿನ್ನೆಲೆಯಲ್ಲಿ ಮಕ್ಕಳನ್ನುಪೋಷಕರು ನಿರಾತಂಕವಾಗಿ ಕಳುಹಿಸಿದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಬೆಳಗಾವಿ, ರಾಯಚೂರು, ಧಾರವಾಡ, ಕೊಪ್ಪಳ, ಚಿತ್ರದುರ್ಗ, ಚಾಮರಾಜನಗರ, ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲೂ ವಿದ್ಯಾರ್ಥಿಗಳ ಕಲರವ ಕಂಡುಬಂತು.

ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಫ್‍ಲೈನ್ ತರಗತಿಗಳನ್ನು ಪ್ರಾರಂಭಿಸಲಾಯಿತು. 10 ತಿಂಗಳಿನಿಂದ ಮನೆಯಲ್ಲೇ ಕುಳಿತು ಆನ್‍ಲೈನ್ ಶಿಕ್ಷಣದಿಂದ ಬೇಸತ್ತಿದ್ದ ಮಕ್ಕಳು ಇಂದು ಶಾಲೆಗೆ ತೆರಳಿ ತಮ್ಮ ಸ್ನೇಹಿತರು, ಶಿಕ್ಷಕರು, ಉಪನ್ಯಾಸಕರೊಂದಿಗೆ ಬೆರೆತು ಸಂತಸ ಪಟ್ಟರು.

ಬಹುತೇಕ ಶಾಲಾ-ಕಾಲೇಜಿನವರು ವಿದ್ಯಾರ್ಥಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿದರು. ಶಾಲೆಗಳ ಮುಂಭಾಗದಲ್ಲಿ ಬಾಳೆಕಂದು, ಮಾವಿನ ತೋರಣದಿಂದ ಸಿಂಗರಿಸಲಾಗಿತ್ತು. ಕೋವಿಡ್-19 ಮಾರ್ಗಸೂಚಿಯಂತೆ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಪ್ರತಿ ಕೊಠಡಿಗೆ ಸ್ಯಾನಿಟೈಜರ್ ಸಿಂಪಡಣೆ, ಶೌಚಾಲಯ ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದರ ಜತೆಗೆ ವಿದ್ಯಾರ್ಥಿಗಳು ತಾವು ತಂದ ತಿಂಡಿ ಇನ್ನಿತರ ಪದಾರ್ಥಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳದಂತೆ ಸಿಬ್ಬಂದಿಗೆ ನೋಡಿಕೊಳ್ಳುವ ಹೊಣೆಗಾರಿಕೆ ನೀಡಲಾಗಿದೆ.

ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳಲ್ಲಿ ವಿದ್ಯಾರ್ಥಿಗಳ ಗುರುತಿನ ಚೀಟಿ ತೋರಿಸಿದರೆ ಉಚಿತವಾಗಿ ಓಡಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಬಹುತೇಕ ಶಾಲೆಗಳಿಗೆ ವಿದ್ಯಾರ್ಥಿಗಳು ಆಗಮಿಸಿದ್ದು ತರಗತಿಗಳು ಪ್ರಾರಂಭವಾಗಿದ್ದವು. ಇನ್ನೂ ಹಲವು ಶಾಲೆಗಳಿಗೆ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು. ಕೆಲವು ಪೋಷಕರಲ್ಲಿ ಇನ್ನೂ ಆತಂಕ ದೂರವಾಗಿಲ್ಲ. ಇನ್ನೂ ನಾಲ್ಕಾರು ದಿನ ಪರಿಸ್ಥಿತಿ ನೋಡಿಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಲು ತೀರ್ಮಾನಿಸಿದ್ದೇವೆ ಎಂದು ಹಲವು ಪೋಷಕರು ಹೇಳುತ್ತಾರೆ.

ಖುಷಿಯಿಂದಲೇ ಬಂದಿದ್ದೇವೆ: ಕಾಲೇಜಿಗೆ ಬಂದು ಪಾಠ ಕಲಿಯದಿದ್ದರೆ ಮುಂದೆ ಕಷ್ಟವಾಗಲಿದೆ. ಖುಷಿ ಹಾಗೂ ಆತಂಕ ಎರಡರ ನಡುವೆ ಕಾಲೇಜಿಗೆ ಬಂದಿದ್ದೇವೆ ಎಂದು ಮೈಸೂರು ಮಹಾರಾಣಿ ಕಾಲೇಜು, ಸದ್ವಿದ್ಯ ಪಾಠಶಾಲೆ, ಜೆಎಸ್‍ಎಸ್ ಕಾಲೇಜು ವಿದ್ಯಾರ್ಥಿನಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾವಾಗ ಕಾಲೇಜು ಪ್ರಾರಂಭವಾಗುತ್ತದೋ ಎಂದು ಕಾಯುತ್ತಿದ್ದೆವು. ಇಂದು ಕಾಲೇಜು ಪ್ರಾರಂಭವಾಗಿದೆ. ಬಹುತೇಕ ವಿದ್ಯಾರ್ಥಿನಿಯರು ಬಂದಿದ್ದೇವೆ. ಮೊದಲು ಕೊರೊನಾ ಭಯ ಕಾಡುತ್ತಿತ್ತು. ಈಗ ಅದು ನಿಯಂತ್ರಣದಲ್ಲಿದೆ. ಅಲ್ಲದೆ, ಕಾಲೇಜುಗಳಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಬರುತ್ತಿದ್ದೇವೆ. ಭಯ ಇಲ್ಲ ಎಂದು ಹೇಳಿದರು.

ಪೋಷಕರಿಗೆ ಭಯವಿದೆ. ಅವರ ಒಪ್ಪಿಗೆ ಪಡೆದುಕೊಂಡು ಬಂದಿದ್ದೇವೆ. ಆನ್‍ಲೈನ್‍ನಲ್ಲಿ ಕಲಿಯುವುದು ಕಷ್ಟ. ಕಾಲೇಜಿಗೆ ಬಂದರೆ ಸುಲಭವಾಗಿ ಅರ್ಥವಾಗುತ್ತದೆ. ಮುಂದಿನ ಪರೀಕ್ಷೆಗೆ ಅನುಕೂಲವಾಗುತ್ತದೆ. ಮಹಾರಾಣಿ ಕಾಲೇಜಿನಲ್ಲಿ ಎರಡು ಸಾವಿರ ವಿದ್ಯಾರ್ಥಿನಿಯರಿದ್ದೇವೆ. ವರ್ಷದ ಮೊದಲ ದಿನವಾದ್ದರಿಂದ ಕೇವಲ 60 ಮಂದಿ ಮಾತ್ರ ಹಾಜರಾಗಿದ್ದೇವೆ ಎಂದು ಹೇಳುತ್ತಾರೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು, ಮಹಾರಾಣಿ ಅಮ್ಮಣ್ಣಿ ಕಾಲೇಜು, ನ್ಯಾಷನಲ್ ಕಾಲೇಜು, ಪಿಇಎಸ್ ಕಾಲೇಜು, ಸರ್ಕಾರಿ ಕಲಾ ಕಾಲೇಜು ಸೇರಿದಂತೆ ನಗರದ ಬಹುತೇಕ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಿ ಕಂಡುಬಂತು.

ಹಾಜರಾಗುವುದು ಕಡ್ಡಾಯವಲ್ಲ: ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ. ಆನ್‍ಲೈನ್ ಮೂಲಕವೂ ಕಲಿಯಬಹುದು. ಪೋಷಕರ ಒಪ್ಪಿಗೆ ಪತ್ರ ನೀಡಬೇಕು. ಮಕ್ಕಳ ಆರೋಗ್ಯದ ಬಗ್ಗೆ ಶಿಕ್ಷಕರೊಬ್ಬರು ನಿಗಾ ಇಟ್ಟಿರುತ್ತಾರೆ. ತರಗತಿಗಳು ಕೆಲವೇ ಗಂಟೆಗಳು ನಡೆಯಲಿವೆ. ಮಕ್ಕಳಿಗೆ ಮನೆಯಿಂದಲೇ ಕುಡಿಯುವ ನೀರು ಕಳುಹಿಸಿಕೊಡಿ. ಶೈಕ್ಷಣಿಕ ಭವಿಷ್ಯಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಸಲಹೆ ನೀಡಿದ್ದಾರೆ.

Facebook Comments