ಶಾಲಾ-ಕಾಲೇಜು ಆರಂಭವಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‍ ಸಂಚಾರಕ್ಕೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ,ಫೆ.5- ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರುವ ಹಿನ್ನೆಲೆ ಸಾರಿಗೆ ಸಂಸ್ಥೆಯ ಬಸ್‍ಗಳ ಹೆಚ್ಚುವರಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರು, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಸವದಿ ಅವರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಸಾರಿಗೆ ನಿಗಮಗಳು ವಿದ್ಯಾರ್ಥಿಗಳಿಗೆ ರಿಯಾಯ್ತಿ ಪಾಸುಗಳನ್ನು ಒದಗಿಸಿ ಅನುಕೂಲ ಮಾಡಿಕೊಟ್ಟಿವೆ. ಆದರೆ ಬಹುತೇಕ ಕಡೆಗಳಲ್ಲಿ ಸಾರಿಗೆ ಬಸ್ ಸೌಲಭ್ಯವನ್ನೇ ಅವಲಂಬಿಸಿರುವ ಮಕ್ಕಳು, ಶಾಲೆಗಳಿಗೆ ಸರಿಯಾಗಿ ಹಾಜರಾಗುತ್ತಿಲ್ಲವೆಂಬುದು ಶಿಕ್ಷಣ ಇಲಾಖೆಯ ಅಧಿಕಾರಿಗಳ ವರದಿಯಲ್ಲಿ ವ್ಯಕ್ತವಾಗಿದೆ. ಶಾಲಾ ಸಮಯಕ್ಕೆ ಅನುಕೂಲವಾಗುವಂತೆ ಬಸ್‍ಗಳ ಸಂಖ್ಯೆ ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ.

ಕೊರೊನಾ ಹಿನ್ನೆಲೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾವು-ನೀವೆಲ್ಲಾ ಸಭೆ ಸೇರಿ ಶಾಲೆಗಳನ್ನು ಆರಂಭಿಸುವ ತೀರ್ಮಾನ ಕೈಗೊಂಡಂತೆ ಶಾಲಾ-ಕಾಲೇಜುಗಳು ತಡವಾಗಿ ಆರಂಭವಾಗಿವೆ. ಪ್ರಸ್ತುತ ಶಾಲೆಗಳು ಪೂರ್ಣ ಅವಧಿ ನಡೆಯುತ್ತಿವೆ. ಸೋಂಕಿನ ಮಧ್ಯೆಯೂ ಶಾಲೆಗಳಿಗೆ ಮಕ್ಕಳು ನಮ್ಮ ನಿರೀಕ್ಷೆ ಮೀರಿ ಬರುತ್ತಿರುವುದು ಸಂತಸದ ಸಂಗತಿ.
ಕೊರೊನಾ ಹಿನ್ನೆಲೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಸ್ ಕಾರ್ಯಾಚರಿಸುತ್ತಿರದ ಕಾರಣ ಮಕ್ಕಳಿಗೆ ಸಮಸ್ಯೆಯಾಗ್ತಿದೆ.

ಬಸ್ಗಳು ಸರಿಯಾದ ಸಮಯಕ್ಕೆ ಬಾರದೇ ಕೆಲವೆಡೆ ಮಕ್ಕಳು ಗಂಟೆಗಟ್ಟಲೇ ಕಾಯುತ್ತಿದ್ದಾರೆ. ಶಾಲೆಯ ಸಮಯ ಮೀರಿದ್ದರಿಂದ ಶಾಲೆಗೆ ಬಾರದೇ ಮನೆಯತ್ತಲೇ ಹೆಜ್ಜೆ ಹಾಕುತ್ತಿದ್ದಾರೆಂಬ ವರದಿಗಳೂ ಇವೆ ಎಂದು ಸುರೇಶ್‍ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದ ಬಹುತೇಕ ಹಳ್ಳಿಗಳ ವಿದ್ಯಾರ್ಥಿಗಳು ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಗಳ ಶಾಲಾ-ಕಾಲೇಜುಗಳಿಗೆ ಹೋಗಿ ಬರಬೇಕಾಗಿರುವುದರಿಂದ ಮೊದಲಿನಂತೆ ಸರಿಯಾಗಿ ಬಸ್‍ಗಳು ಸೌಲಭ್ಯ ಸಿಗಬೇಕಿದೆ. ಬಸ್ ಸೌಲಭ್ಯ ಇಲ್ಲದೇ ನಾವು ಶಾಲೆಗಳನ್ನು ಆರಂಭಿಸಿದ್ದರ ಉದ್ದೇಶ ಸಾಕಾರವಾಗುವುದಿಲ್ಲ.

ಸಾರಿಗೆ ಸೌಲಭ್ಯ ತೊಂದರೆಯಿಂದ ಮಕ್ಕಳು ಶಾಲೆಗಳಿಗೆ ಹಾಜರಾಗದೇ ಇರುವುದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶೈಕ್ಷಣಿಕ ಹಿನ್ನೆಡೆಗೆ ಕಾರಣವಾಗಬಾರದು ಎಂದೂ ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಸಾಲಿನ ಎಸ್‍ಎಸ್‍ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆ ವೇಳೆ ಸಾರಿಗೆ ಇಲಾಖೆ ಸಹಕಾರ ಇಡೀ ರಾಜ್ಯದ ಪೋಷಕರ ಮತ್ತು ಮಕ್ಕಳ ಗಮನ ಸೆಳೆದಿದೆ.

ಈ ಪರೀಕ್ಷೆಯ ಯಶಸ್ಸಿನಲ್ಲಿ ಸಾರಿಗೆ ಮತ್ತು ಆರೋಗ್ಯ ಇಲಾಖೆಯದ್ದೂ ಸಿಂಹಪಾಲಿದೆ. ಹಾಗಾಗಿ ದಯ ಮಾಡಿ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್‍ಗಳ ವ್ಯವಸ್ಥೆ ಕಲ್ಪಿಸುವಂತೆ ಪತ್ರದ ಮೂಲಕ ಸುರೇಶ್‍ಕುಮಾರ್ ಸಾರಿಗೆ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Facebook Comments