ಖಾಸಗಿ ಶಾಲಾ ಶುಲ್ಕ ನಿಗದಿ ಬಗ್ಗೆ ತಲೆ ಕೆಡಿಸಿಕೊಳ್ಳದ ಸರ್ಕಾರ, ನಾಳೆಯಿಂದ ಪೋಷಕರ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ಖಾಸಗಿ ಶಾಲಾ ಶುಲ್ಕ ನಿಗದಿ ಬಗ್ಗೆ ಇಂದು ಸಂಜೆಯೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮತ್ತೊಮ್ಮೆ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಪೋಷಕರ ಸಮನ್ವಯ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸುವ ಕುರಿತಂತೆ ಆಡಳಿತ ಮಂಡಳಿಗಳು ಮತ್ತು ಪೋಷಕರ ಸಂಘಟನೆಗಳೊಂದಿಗೆ ಸಭೆ ನಡೆಸಿದ್ದು, ರಾಜ್ಯ ಸರ್ಕಾರ ಈವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಬೇಡಿಕೆಗಳ ಈಡೇರಿಕೆಗೆ ಇಂದು ಸಂಜೆಯವರೆಗೆ ಸರ್ಕಾರಕ್ಕೆ ಗಡುವು ನೀಡುತ್ತೇವೆ.

ಸರ್ಕಾರ ಸ್ಪಂದಿಸದಿದ್ದರೆ ದೊಡ್ಡಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದು ವಾಯ್ಸ್ ಆಫ್ ಪೇರೆಂಟ್ಸ್ ಪೋಷಕರ ಸಮನ್ವಯ ಸಮಿತಿ ಸೇರಿದಂತೆ ವಿವಿಧ ಪೋಷಕರ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಪೋಷಕರ ಸಂಘಟನೆಗಳ ಮುಖಂಡರಾದ ಚಿದಾನಂದ್, ಯೋಗಾನಂದ್ ಮುಂತಾದವರು ಮಾತನಾಡಿ, ಕಳೆದ 9 ತಿಂಗಳಿನಿಂದ ಶಾಲೆಗಳು ನಡೆದಿಲ್ಲ.

ಖಾಸಗಿ ಶಾಲಾ ಆಡಳಿತ ಮಂಡಳಿಯವರು ಕನಿಷ್ಠ ಪ್ರಮಾಣದ ಶುಲ್ಕ ಕಡಿಮೆ ಮಾಡಬೇಕೆಂದು ಆಗ್ರಹ ಮಾಡಿದ್ದೆವು. ಸರ್ಕಾರಕ್ಕೂ ಕೂಡ ಮನವಿ ಸಲ್ಲಿಸಿದ್ದೆವು. ಬೀದಿಗಿಳಿದು ಮೂರು ಬಾರಿ ಹೋರಾಟ ಕೂಡ ಮಾಡಿದ್ದೆವು. ಶಿಕ್ಷಣ ಸಚಿವರಾದ ಸುರೇಶ್‍ಕುಮಾರ್ ಮನೆ ಎದುರು ಕಸ ಗುಡಿಸುವ ಚಳವಳಿ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಯಿತು. ಆದರೂ ಈವರೆಗೆ ಶುಲ್ಕ ಇಳಿಕೆ ಮಾಡುವುದಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

ಖಾಸಗಿ ಆಡಳಿತ ಮಂಡಳಿ ಹಾಗೂ ಪೋಷಕರ ಸಂಘಟನೆಗಳ ಪದಾಧಿಕಾರಿ ಗಳೊಂದಿಗೆ ಸರ್ಕಾರ ಸಭೆ ನಡೆಸಿದೆಯಾದರೂ ಶುಲ್ಕ ಇಳಿಕೆ ಮಾಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಇಂದು ಸಂಜೆವರೆಗೆ ಕಾದಿದ್ದು, ನಾಳೆಯಿಂದ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಪೋಷಕರು ಬೇಡಿಕೆ ಈಡೇರಿಸಬೇಕೆಂದು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತ ಖಾಸಗಿ ಶಾಲೆಯವರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡುತ್ತ ಬಂದಿದೆ. ಈಗಾಗಲೇ ಖಾಸಗಿ ಶಾಲೆಯವರು ಹಲವೆಡೆ ಸಂಪೂರ್ಣ ಶುಲ್ಕ ವಸೂಲಿ ಮಾಡಿದ್ದಾರೆ. ಶುಲ್ಕ ಕಟ್ಟದೆ ಅಸಹಾಯಕರಾಗಿರುವವರು ಪರದಾಡುತ್ತಿದ್ದಾರೆ. ಮತ್ತೆ ಕೆಲವೆಡೆ ಶುಲ್ಕಕ್ಕಾಗಿ ಒತ್ತಾಯ ಮಾಡಲಾಗುತ್ತಿದೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೆಳ ಹಾಗೂ ಮಧ್ಯಮ ವರ್ಗದವರ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಸರ್ಕಾರ ಶುಲ್ಕ ನಿಗದಿ ಮಾಡುವ ಮೂಲಕ ಪೋಷಕರ ನೆರವಿಗೆ ಬರಬೇಕು. ಆದರೆ, ಮೌನ ವಹಿಸಿ ಖಾಸಗಿಯವರಿಗೆ ಅನುಕೂಲ ಮಾಡಿಕೊಡುತ್ತಿದೆ. ಹಾಗಾಗಿ ನಾವು ಮತ್ತೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಪೋಷಕರ ಸಂಘಟನೆಗಳು ಹೇಳಿವೆ.

Facebook Comments