ಶಾಲೆಗೆ ಬಂದ ಮಕ್ಕಳು, ಸಿಹಿ ನೀಡಿ ಸ್ವಾಗತಿಸಿದ ಶಿಕ್ಷಕರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.25- ಶಾಲೆಗಳಲ್ಲಿ ಚಿಣ್ಣರ ಸಂಭ್ರಮ ಮನೆ ಮಾಡಿತ್ತು. ಕೊರೊನಾ ಕಾರಣದಿಂದ ಕಳೆದ ಒಂದು ವರ್ಷ ಎಂಟು ತಿಂಗಳಿನಿಂದ ಶಾಲೆಯತ್ತ ಮುಖ ಮಾಡದ ಚಿಣ್ಣರು ಇಂದು ಆರಂಭಗೊಂಡ ಶಾಲೆಗಳಿಗೆ ಖುಷಿಯಿಂದಲೇ ಬಂದರು.

ಶಿಕ್ಷಕರು, ಸಿಬ್ಬಂದಿಯವರು ವಿದ್ಯಾರ್ಥಿಗಳನ್ನು ಸಿಹಿನೀಡಿ ಬರಮಾಡಿಕೊಂಡರು. ಕೊರೊನಾ ಭೀತಿ ದೂರವಾಗಿರುವ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಧೈರ್ಯವಾಗಿಯೇ ಶಾಲೆಗಳಿಗೆ ಕಳುಹಿಸಿದ್ದು ಕಂಡುಬಂತು.ಭೌತಿಕ ತರಗತಿಗಳು ಆರಂಭಗೊಂಡಿದ್ದು, ಶಾಲೆಗಳಲ್ಲಿ ಚಿಣ್ಣರ ಸಂತೋಷ ಮೊಳಗಿತು.

ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿರಬೇಕು ಎಂದು ಸೂಚಿಸಲಾಗಿದ್ದ ಹಿನ್ನೆಲೆಯಲ್ಲಿ ಪೋಷಕರ ಒಪ್ಪಿಗೆ ಪತ್ರ ನೀಡಿದ ಮಕ್ಕಳು ಸಾಲಾಗಿ ನಿಂತು ಅದನ್ನು ಶಾಲಾ ಸಿಬ್ಬಂದಿಗೆ ತೋರಿಸಿ ಒಳ ಬರುತ್ತಿದ್ದರು. ಬಹುತೇಕ ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆಗಳನ್ನು ಆರಂಭಿಸಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಕೂಡ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು, ಇಂದಿನಿಂದ ಆರಂಭವಾದ ಬಹುತೇಕ ತರಗತಿಗಳಿಗೆ ಬಹುತೇಕ ಹಾಜರಾತಿ ಕಂಡುಬಂತು.

ಮಕ್ಕಳು ಭೌತಿಕ ತರಗತಿಗಳಿಗೆ ಹಾಜರಾಗುವುದು ಕಡ್ಡಾಯವೇನಲ್ಲ. ಆನ್‍ಲೈನ್, ಆಫ್‍ಲೈನ್ ಎರಡರಲ್ಲೂ ತರಗತಿಗಳು ನಡೆಯಲು ಅವಕಾಶ ಕಲ್ಪಿಸಲಾಗಿದೆಯಾದರೂ ಕೂಡ ಕಳೆದ 18 ತಿಂಗಳಿನಿಂದ ಮನೆಯಲ್ಲೇ ಇದ್ದ ಮಕ್ಕಳು ಶಾಲೆಗಳು ಆರಂಭವಾಗುತ್ತಿದ್ದಂತೆ ಇಂದು ಸಮವಸ್ತ್ರ ಧರಿಸಿ ಬ್ಯಾಗ್‍ಗಳನ್ನು ಹಿಡಿದು ಶಾಲೆಗಳಿಗೆ ಬರುತ್ತಿದ್ದುದು ಕಂಡುಬಂತು.

ಎರಡು ಡೋಸ್ ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ ಶಾಲೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಶೇ.50ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಸೂಚಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಅರ್ಧ ದಿನ ಮಾತ್ರ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ಈ ಅವಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವುದಿಲ್ಲ.

ನವೆಂಬರ್ 2ರಿಂದ ಪೂರ್ಣಾವ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಶಾಲೆಗೆ ಬಂದ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆ ಮಾಡಿ ಒಳಬಿಡಲಾಗುತ್ತಿತ್ತು. ಕಡ್ಡಾವಾಗಿ ಮಾಸ್ಕ್ ಧರಿಸುವುದು, ಕನಿಷ್ಟ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಶಿಕ್ಷಕರು ಸೂಚನೆ ನೀಡಿದರು. ಮನೆಯಲ್ಲೇ ಇದ್ದು ಮೊಬೈಲ್, ಲ್ಯಾಪ್‍ಟಾಪ್‍ಗಳಲ್ಲಿ ಆನ್‍ಲೈನ್ ಕ್ಲಾಸ್‍ಗಳಲ್ಲೇ ತಲ್ಲೀನರಾಗಿದ್ದ ಚಿಣ್ಣರು ಇಂದು ಶಾಲೆಯ ವಾತಾವರಣ ನೋಡುತ್ತಿದ್ದಂತೆ ಪುಳಕಿತರಾಗಿ ತಮ್ಮ ಸ್ನೇಹಿತರೊಂದಿಗೆ ಸಂತಸದಿಂದ ಮಾತನಾಡುತ್ತ ಕಾಲ ಕಳೆದರು.

ಕೊರೊನಾ ಸೋಂಕು ಕ್ಷೀಣಿಸಿದೆಯಾದರೂ ಇನ್ನೂ ನಿರ್ಮೂಲನೆಯಾಗಿಲ್ಲ. ಮಕ್ಕಳಿಗೆ ಇನ್ನೂ ಕೊರೊನಾ ವ್ಯಾಕ್ಸಿನ್ ನೀಡಿಲ್ಲ. ಹಾಗಾಗಿ ಶಾಲಾ ಆಡಳಿತ ಮಂಡಳಿಯವರು, ಪೋಷಕರು ಇನ್ನೂ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ.

Facebook Comments