ಡಿಸೆಂಬರ್ ನಂತರವೂ ಶಾಲೆ ಓಪನ್ ಡೌಟ್..? ನಾಳೆ ಶಿಕ್ಷಣ ತಜ್ಞರೊಂದಿಗೆ ಸಿಎಂ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ಪದವಿ ಹಾಗೂ ಮೇಲ್ಪಟ್ಟ ಕಾಲೇಜುಗಳ ಆರಂಭದ ನಂತರ ಕೋವಿಡ್ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲಾ -ಕಾಲೇಜುಗಳನ್ನು ಆರಂಭಿಸುವುದು ಅನುಮಾನವಾಗಿದೆ.  ಕೋವಿಡ್ ಸೋಂಕಿನಿಂದ ಮಾರ್ಚ್ ತಿಂಗಳಿನಿಂದ ಮುಚ್ಚಲ್ಪಟ್ಟಿರುವ ಶಾಲಾಕಾಲೇಜುಗಳ ಪೈಕಿ ನವೆಂಬರ್ 17ರಿಂದ ಪದವಿ, ಇಂಜಿನಿಯರಿಂಗ್, ಡಿಪ್ಲೊಮೋ, ಸ್ನಾತಕ್ಕೋತ್ತರ ಕಾಲೇಜುಗಳನ್ನು ಆರಂಭಿಸಲಾಗಿದೆ.

ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ರೀತಿ ಪರೀಕ್ಷೆಗೆ ಒಳಗಾಗ 26205 ವಿದ್ಯಾರ್ಥಿಗಳ ಪೈಕಿ 117 ಮಂದಿಗೆ ಸೋಂಕಿರುವುದು ಖಚಿತವಾಗಿದೆ. 5378 ಬೋಧಕ ವೃಂದದ ಪೈಕಿ 51 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.  2680 ಮಂದಿ ಬೋಧಕೇತರ ಸಿಬ್ಬಂದಿ ಸೇರಿ ಒಟ್ಟು 38653 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

ಅವರಲ್ಲಿ ನಿನ್ನೆಯವರೆಗೆ 168 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಪದವಿ ಮೇಲ್ಪಟ್ಟ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ. ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಜೇಷನ್ ಬಳಕೆ, ಮಾಸ್ಕ್ ಹಾಕುವ ನಿಯಮಗಳನ್ನು ಪಾಲನೆ ಮಾಡುತ್ತಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿನಿಂದ ಮುಚ್ಚಲ್ಪಟ್ಟಿರುವ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ನಾಳೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಲಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿಕ್ಷಣ ಇಲಾಖೆಯ ಸಚಿವರು ಮತ್ತು ಅಕಾರಿಗಳ ಜತೆ ಮಹತ್ವದ ಸಭೆ ನಡೆಸಲಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್, ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದು , ಶಾಲಾ ಕಾಲೇಜುಗಳನ್ನು ಆರಂಭಿಸಬೇಕೇ ಅಥವಾ ಇನ್ನು ಕೆಲ ದಿನಗಳ ಮಟ್ಟಿಗೆ ಯಥಾ ಸ್ಥಿತಿಯಲ್ಲಿ ಮುಂದುವರೆಸಬೇಕೇ ಎಂಬುದರ ಕುರಿತಂತೆ ಸರ್ಕಾರ ತೀರ್ಮಾನವನ್ನು ಪ್ರಕಟಿಸಲಿದೆ.

ಕೆಲ ಪೋಷಕರು ಶಾಲಾ ಕಾಲೇಜುಗಳನ್ನು ಆರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರೆ, ಕೆಲವರು ಒತ್ತಡ ಹಾಕಿದ್ದರೆ , ಇನ್ನು ಕೆಲವರು ಬೇಡ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಶಿಕ್ಷಣ ತಜ್ಞರು ಪಾಳಿ ಸರದಿಯಲ್ಲಿ ಶಾಲೆಗಳನ್ನು ಆರಂಭಿಸಬೇಕು ಇಲ್ಲದಿದ್ದರೆ ಖಾಸಗಿ ಶಾಲಾ ಆಡಳಿತ ಮಂಡಳಿ ಪ್ರಾರಂಭಿಸಲು ತುದಿಗಾಲಲ್ಲೇ ನಿಂತಿದೆ.

ನಾಳಿನ ಸಭೆಯಲ್ಲಿ ಎಲ್ಲರ ಅಭಿಪ್ರಾಯವನ್ನು ಪಡೆದು ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಅಂತಿಮವಾಗಿ ಸರ್ಕಾರ ತನ್ನ ನಿಲುವನ್ನು ಘೋಷಣೆ ಮಾಡಲಿದೆ. ಈಗಾಗಲೇ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಕೂಡ ಶಾಲಾ ಅಭಿವೃದ್ಧಿ ಸಮಿತಿ , ಪೋಷಕರು, ಕ್ಷೇತ್ರ ಶಿಕ್ಷಣಾಕಾರಿಗಳು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಅಭಿಪ್ರಾಯವನ್ನು ಪಡೆದು ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಈಗಾಗಲೇ ಪದವಿ ಕಾಲೇಜುಗಳು , ವೈದ್ಯಕೀಯ , ಎಂಜಿನಿಯರಿಂU, ದಂತ ವೈದ್ಯಕೀಯ, ಡಿಪ್ಲೊಮೋ ಕೋರ್ಸ್‍ಗಳನ್ನು ಕಳೆದ ವಾರವಷ್ಟೇ ಆರಂಭಿಸಿದ್ದು , ಈಗ ಶಾಲಾ ಕಾಲೇಜುಗಳನ್ನು ತೆರೆಯಬೇಕೇ ಇಲ್ಲವೇ ಈಗಿರುವ ಆನ್‍ಲೈನ್ ವ್ಯವಸ್ಥೆಯನ್ನೇ ತಾತ್ಕಾಲಿಕವಾಗಿ ಮುಂದುವರೆಸಬೇಕೇ ಎಂಬುದರ ಬಗ್ಗೆ ಸರ್ಕಾರ ತೀರ್ಮಾನವನ್ನು ಕೈಗೊಳ್ಳಲಿದೆ.

ಮೂಲಗಳ ಪ್ರಕಾರ ಸದ್ಯಕ್ಕೆ ದ್ವಿತೀಯ ಪಿಯುಸಿಯಿಂದ ಎಂಟನೇ ತರಗತಿಯವರೆಗೆ ಮಾತ್ರ ಪಾಳಿ ಸರದಿಯಲ್ಲಿ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿದೆ. ಈಗಾಗಲೇ ಪದವಿ ಕಾಲೇಜುಗಳಲ್ಲಿ ಕೆಲವು ಕಡೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೋವಿಡ್-19 ಕಂಡು ಬಂದಿದೆ. ಇದು ದೊಡ್ಡ ಮಟ್ಟದಲ್ಲೇನೋ ಪರಿಣಾಮ ಬೀರದೇ ಇರುವ ಕಾರಣ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಒಂದು ವೇಳೆ ನಾಳಿನ ಸಭೆಯಲ್ಲಿ ಯಾವುದೇ ರೀತಿಯ ಸ್ಪಷ್ಟ ನಿಲುವು ಹೊರ ಬಾರದೆ ಇದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ವ ಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯವನ್ನು ಪಡೆದ ನಂತರವೇ ತೀರ್ಮಾನವನ್ನು ತೆಗೆದುಕೊಳ್ಳುವ ಸಂಭವವೂ ಇದೆ. ಒಂದು ವೇಳೆ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿದ ಮೇಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೋವಿಡ್ ಪಾಸಿಟಿವ್ ಕಂಡು ಬಂದರೆ ಪೋಷಕರ ಕೆಂಗಣ್ಣಿಗೆ ಸರ್ಕಾರ ಗುರಿಯಾಗಬೇಕಾಗುತ್ತದೆ.

ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸ್ಥಿತಿಯಲ್ಲಿದ್ದು , ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. ಮಕ್ಕಳಿಗೆ ಕೋವಿಡ್ ಕಂಡು ಬಂದರೆ ಸರ್ಕಾರ ಈವರೆಗೆ ನಡೆಸಿದ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂಬ ಆತಂಕವೂ ಕಾಡುತ್ತದೆ. ಹೀಗಾಗಿ ಸರ್ಕಾರ ನಾಳೆ ತೆಗೆದುಕೊಳ್ಳಲಿರುವ ನಿರ್ಧಾರದ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.

ಹಾಗೊಂದು ವೇಳೆ ಪೋಷಕರ ಒತ್ತಡಕ್ಕೆ ಮಣಿದು ಶಾಲೆಗಳನ್ನು ಪ್ರಾರಂಭಿಸಿದರೂ ಈಗಾಗಲೇ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ವಿಸಿರುವ ನಿರ್ಬಂಧಗಳನ್ನೇ ಇಲ್ಲಿಯೂ ಕೂಡ ಅಳವಡಿಸಿಕೊಳ್ಳ ಬೇಕಾಗುತ್ತದೆ. ಶಾಲೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಯೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಿ ವೈದ್ಯಕೀಯ ವರದಿ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು.

ಶಾಲೆಗಳಿಗೆ ಹಾಜರಾಗಬೇಕಾದರೆ ಪೋಷಕರಿಂದ ಅನುಮತಿ ಪತ್ರ , ಮಾಸ್ಕ್ ಕಡ್ಡಾಯ , ಸ್ಯಾನಿಟೈಸರ್ ಬಳಕೆ, ರ್ಯಾಪಿಡ್ ಟೆಸ್ಟ್ ಸೇರಿದಂತೆ ಕೆಲವು ನಿಬಂಧನೆಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಪಾಲಿಸಲೇಬೇಕು. ಒಟ್ಟಿನಲ್ಲಿ ನಾಳೆ ಸರ್ಕಾರ ಶಾಲಾ ಕಾಲೇಜುಗಳನ್ನು ಆರಂಭಿಸುವುದು ಇಲ್ಲವೇ ಈಗಿರುವ ಪರಿಸ್ಥಿತಿಯನ್ನೇ ಮುಂದುವರೆಸುವುದೇ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ.

Facebook Comments