ನಾಳೆಯಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.31- ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಮಾರ್ಚ್‍ನಿಂದ ಮುಚ್ಚಲ್ಪಟ್ಟಿದ್ದ ಶಾಲಾ-ಕಾಲೇಜುಗಳು ನಾಳೆಯಿಂದ ಆರಂಭವಾಗಲಿದ್ದು, ಮೊದಲ ದಿನ ವಿದ್ಯಾರ್ಥಿಗಳಿಗೆ ಮೊದಲ ಒಂದು ಗಂಟೆ ಕಾಲ ಪಾಠ ಮಾಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನಿರ್ಧರಿಸಿದೆ.  10 ಮತ್ತು 12ನೆ ತರಗತಿ ಮಕ್ಕಳಿಕೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವಂತೆ ಇಲಾಖೆ ಈಗಾಗಲೇ ರಾಜ್ಯದ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ ಧರಿಸುವುದು, ಜನದಟ್ಟಣೆ ಇರುವ ಪ್ರದೇಶಗಳಿಗೆ ತೆರಳದೆ ಇರುವುದು, ಕೈಗಳನ್ನು ಸ್ವಚ್ಛತೆಯಿಂದ ಇರಿಸಿಕೊಳ್ಳುವ ಕುರಿತಂತೆ ಮಕ್ಕಳಿಗೆ ಜಾಗೃತಿ ಮೂಡಿಸುವಂತೆ ಸೂಚಿಸಿದೆ. ಮಕ್ಕಳ ದೈಹಿಕ ಚಲನವಲನ ಹಾಗೂ ಮಾನಸಿಕ ಆರೋಗ್ಯದ ಕುರಿತಂತೆಯೂ ಗಮನ ಹರಿಸುವಂತೆ ತಿಳಿಸಲಾಗಿದೆ.

ಶಾಲೆಗಳಲ್ಲಿ ಮಕ್ಕಳಿಗೆ ಬೋಧನೆ ಮಾಡುವ ಶಿಕ್ಷಕರು ಸದಾಕಾಲ ಮಾಸ್ಕ್ ಧಾರಣೆ ಮಾಡಬೇಕಿದೆ. 50 ವರ್ಷಕ್ಕಿಂತ ಮೇಲ್ಪಟ್ಟವರು ಫೇಸ್ ಶೀಲ್ಡ್ ಧರಿಸಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.

ಶಾಲೆ-ಕಾಲೇಜು ಆರಂಭಕ್ಕೆ ಇನ್ನೊಂದು ದಿನ ಮಾತ್ರವೇ ಬಾಕಿ ಇರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಬೆಂಗಳೂರಿನ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುರಕ್ಷತಾ ಕ್ರಮಗಳ ಪರಿಶೀಲನೆ ನಡೆಸಿದ್ದರು.

Facebook Comments