ಶಾಲಾ ಕೊಠಡಿಗಳಾದ ರೈಲ್ವೆ ಬೋಗಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜ.12- ನಗರದಲ್ಲೀಗ ರೈಲ್ವೆ ಬೋಗಿಗಳನ್ನೇ ಶಾಲೆಯನ್ನಾಗಿ ಪರಿವರ್ತಿಸಲಾಗಿದೆ. ಕೆಲವು ಕಡೆ ಶಾಲೆಗೆ ಬೋಗಿಯ ರೂಪ ಕೊಡಲಾಗುತ್ತದೆ. ಆದರೆ ನಗರದಲ್ಲಿ ಬೋಗಿಗಳು ಶಾಲೆಗಳಾಗಿ ಮಾರ್ಪಾಡು ಮಾಡುವ ಮೂಲಕ ಗಮನ ಸೆಳೆಯಲಾಗಿದೆ.

ನಗರದ ಅಶೋಕಪುರಂನಲ್ಲಿರುವ ರೈಲ್ವೆಕಾರ್ಯಾಗಾರದ ಬಳಿ ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಶಾಲೆಯ ಪಕ್ಕದಲ್ಲೇ ರೈಲ್ವೆ ಬೋಗಿಗಳನ್ನು ಇಟ್ಟು ಶಾಲಾ ಕೊಠಡಿಗಳನ್ನಾಗಿ ಮಾರ್ಪಡಿಸಲಾಗಿದೆ. ಮಹಾರಾಜರ ಕಾಲದಲ್ಲಿ ಸ್ಥಾಪನೆಯಾಗಿದ್ದ ಈ ಶಾಲೆ ಶಿಥಿಲಾವಸ್ಥೆಯಲ್ಲಿತ್ತು. ಶಿಕ್ಷಣ ಇಲಾಖೆಯವರು ಈ ಶಾಲೆಯನ್ನು ಮುಚ್ಚುವಂತೆ ಸೂಚಿಸಿದ್ದರು.

ಕೂಡಲೇ ಶಾಲೆಯ ಶಿಕ್ಷಕರು ಪಕ್ಕದಲ್ಲಿದ್ದ ರೈಲ್ವೆ ಕಾರ್ಯಾಗಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಕಟ್ಟಡ ನಿರ್ಮಾಣ ಮಾಡುವುದರ ಬದಲು ಬೋಗಿಗಳನ್ನೇ ಶಾಲಾ ಕೊಠಡಿಗಳನ್ನಾಗಿ ಮಾರ್ಪಡಿಸುವ ಪ್ಲಾನ್ ರೈಲ್ವೆ ಅಧಿಕಾರಿಗಳಿಗೆ ಹೊಳೆದದ್ದೇ ತಕ್ಷಣ ಕಾರ್ಯೋನ್ಮುಖರಾದರು. ಕೂಡಲೇ ರೈಲ್ವೆ ಸಿಬ್ಬಂದಿ ಹಳೆಯ ರೈಲು ಬೋಗಿಗಳನ್ನು ತಂದು ಶಾಲೆಯ ಪಕ್ಕದಲ್ಲಿರಿಸಿ ಅದಕ್ಕೆ ತುಕ್ಕು ರಹಿತ ಬಣ್ಣ ಬಳಿದು ಕನ್ನಡ ವರ್ಣಮಾಲೆ ಬರೆದಿದ್ದಾರೆ. ಇದೀಗ ಈ ರೈಲು ಬೋಗಿ ಎಲ್ಲರ ಗಮನ ಸೆಳೆಯುತ್ತಿದೆ.

ಒಂದು ಬೋಗಿಯಲ್ಲಿ 30ಮಂದಿ ವಿದ್ಯಾರ್ಥಿಗಳು ಪಾಠ ಕೇಳುವ ವ್ಯವಸ್ಥೆ ಮಾಡಲಾಗಿದೆ. ಈ ಬೋಗಿಗಳಿಗೆ ಉಚಿತವಾಗಿ ರೈಲ್ವೆ ಅಧಿಕಾರಿಗಳು ಉಚಿತವಾಗಿ ವಿದ್ಯುತ್ ಕೂಡಾ ಕೊಟ್ಟು ಪ್ಲಾನ್‍ಗಳನ್ನು ಅಳವಡಿಸಿಕೊಟ್ಟಿದ್ದಾರೆ. ಶಾಲೆಯಲ್ಲೇ ಶಿಕ್ಷಕರಿಗೆ ಪ್ರತ್ಯೇಕ ಕೊಠಡಿಯನ್ನು ಮಾಡಲಾಗಿದ್ದು, ಅಧಿಕಾರಿಗಳು,ಶಿಕ್ಷಕರು ಕನ್ನಡ ಪ್ರೇಮ ಮೆರೆಯುವ ಮೂಲಕ ನಗರದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರೈಲ್ವೆ ಅಧಿಕಾರಿ ಮಾಯಗಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶಾಲೆ ಶಿಥಿಲಾವಸ್ಥೆಯಲ್ಲಿದ್ದು, ಅಪಾಯ ಸಂಭವಿಸುವ ಮುನ್ನ ಮುಚ್ಚಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏನು ಮಾಡುವುದು ಎಂಬುದಾಗಿ ಶಿಕ್ಷಕರು ನಮ್ಮ ಬಳಿ ಅಲವತ್ತುಕೊಂಡರು. ಆಗ ನಮಗೆ ರೈಲ್ವೆ ಬೋಗಿಗಳನ್ನು ಕೊಠಡಿಗಳನ್ನಾಗಿ ಮಾರ್ಪಡಿಸುವ ಪ್ಲಾನ್ ಹೊಳೆಯಿತು.ತಕ್ಷಣ ಕಾರ್ಯೋನ್ಮುಖರಾದೆವು. ಒಟ್ಟಾರೆ ವಿದ್ಯಾರ್ಥಿಗಳಿಗೆ ಒಳಿತಾಗಬೇಕು ಎಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿಮಾತನಾಡಿ, ಶಾಲೆ ಶಿಥಿಲಾವಸ್ಥೆಯಲ್ಲಿತ್ತು.ಮುಚ್ಚಬೇಕಲ್ಲ ಎಂಬ ಬೇಸರವಿತ್ತು. ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿದೆವು. ಕಟ್ಟಡಕ್ಕಿಂತ ಉತ್ತಮವಾದ ಶಾಲೆಯನ್ನೇ ನಮಗೆ ನಿರ್ಮಿಸಿ ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

Facebook Comments