ಜುಲೈನಿಂದ ಶಾಲಾ-ಕಾಲೇಜುಗಳು ಆರಂಭ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 26- ರಾಜ್ಯದಲ್ಲಿ ಮಹಾಮಾರಿ ಕೊರೊನಾ ದಾಂಗುಡಿಯಿಂದ ಶಾಲಾ-ಕಾಲೇಜುಗಳ ಅವಧಿ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮುಚ್ಚಿರುವ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿ ಜುಲೈನಿಂದ ಆರಂಭವಾಗುವ ಸಾಧ್ಯತೆ ಇದೆ.

ಮೊದಲು ಜೂನ್ ತಿಂಗಳಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯನ್ನು ಯಾವುದೇ ಅಡ್ಡಿ-ಆತಂಕವಿಲ್ಲದೆ ನಡೆಸಿ ಬಳಿಕ ಈ ಬಗ್ಗೆ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ದೇಶ ಮತ್ತು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಾರಕ ಕೊರೊನಾ ವೈರಸ್ ಶರವೇಗದಲ್ಲಿ ಹರಡುತ್ತಿದೆ. ಹೀಗಿರುವಾಗ ಸಮಯಕ್ಕೆ ಸರಿಯಾಗಿ ಯಾವ ಪ್ರವೇಶ ಪರೀಕ್ಷೆಗಳು ನಡೆಯುವುದಿಲ್ಲ.

ಹಾಗಾಗಿ ಶೈಕ್ಷಣಿಕ ವರ್ಷವನ್ನು ತಡವಾಗಿ ಆರಂಭಿಸಿ. ಎಲ್ಲರೂ ಜೂನ್ ಇಲ್ಲವೆ ಜುಲೈವರೆಗೂ ಕಾದು ನೋಡಿ. ನಂತರವೇ ಶಾಲೆಗಳನ್ನು ಆರಂಭಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಶೇ.30ರಷ್ಟು ಹಾಜರಾತಿಯೊಂದಿಗೆ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಚಿಂತನೆ ಮಾಡಿದೆ. ಜೊತೆಗೆ ಗ್ರೀನ್, ಆರೆಂಜ್ ಜೋನ್‍ಗಳಲ್ಲಿರುವ ಶಾಲೆಗಳ ಆರಂಭ ಮಾಡುವ ಸಾಧ್ಯತೆ ಇದೆ.

ಆರಂಭದಲ್ಲಿ ಹೈಸ್ಕೂಲ್ ತರಗತಿಗಳಷ್ಟೇ ಶುರುವಾಗಲಿದ್ದು, ಉಳಿದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ ಮುಂದುವರಿಕೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸದ್ಯದಲ್ಲೇ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಮೇ 31 ನಂತರ ಕೇಂದ್ರ ಸರ್ಕಾರದ ನಿಯಮಗಳನ್ನು ನೋಡಿಕೊಂಡು ಶಾಲೆಗಳ ಪ್ರಾರಂಭದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಅಲ್ಲದೆ, ಕೇಂದ್ರ ಸರ್ಕಾರದ ಮಾರ್ಗಸೂಚಿ ನಂತರ ರಾಜ್ಯದಲ್ಲಿ ಶಾಲೆಗಳ ಪ್ರಾರಂಭ ಮಾಡುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ. ಹೀಗಾಗಿ ಶಾಲೆಗಳು ಪ್ರಾರಂಭ ಮಾಡುವುದಕ್ಕೆ ಶಿಕ್ಷಣ ಇಲಾಖೆ ಕೆಲವು ಆಯ್ಕೆಗಳನ್ನು ಇಟ್ಟುಕೊಂಡಿದೆ.

ಸಮಿತಿ ರಚನೆ: ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭ ಮಾಡುವ ಬಗ್ಗೆ ಸರ್ಕಾರ ತಜ್ಞರ ಸಮಿತಿಯನ್ನು ರಚನೆ ಮಾಡಲು ಮುಂದಾಗಿದೆ. ಈ ಸಮಿತಿಯೂ ನೀಡುವ ವರದಿ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ತಜ್ಞರ ಸಮಿತಿ ವರದಿಯಂತೆ ವಲಯಗಳ ಪ್ರಕಾರ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ.ಮೊದಲು ಹಸಿರು, ಕಿತ್ತಳೆ ಜಿಲ್ಲೆಗಳಲ್ಲಿ ಶಾಲೆ ಆರಂಭ ಮಾಡಲಾಗುವುದು.

ನಂತರ ಪರಿಸ್ಥಿತಿ ಸುಧಾರಿಸಿದ ಬಳಿಕ ಕೆಂಪು ವಲಯಕ್ಕೆ ಅವಕಾಶ ನೀಡಲಾಗುವುದು. ಕಿರಿಯ ಮಕ್ಕಳು ಮಾತ್ರ ಮನೆಯಲ್ಲಿಯೇ ಅಧ್ಯಯನ ಮುಂದುವರಿಸಲು ಸೂಚಿಸುವ ಸಾಧ್ಯತೆ ಇದೆ.

ಶಾಲಾ-ಕಾಲೇಜು ಆರಂಭ ಮಾಡುವ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಹಿರಿಯ ಅಕಾರಿಗಳ ಜೊತೆ ಸದ್ಯದಲ್ಲೇ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಶಾಲೆಗಳು ಪ್ರಾರಂಭದ ಕುರಿತು ಚರ್ಚೆ ನಡೆಸಲಾಗುತ್ತದೆ. ಸಭೆ ಬಳಿಕ ಶಾಲೆಗಳ ಪ್ರಾರಂಭ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಬಹುತೇಕ ಜುಲೈ- ಆಗಸ್ಟ್‍ನಲ್ಲಿ ಶಾಲೆಗಳನ್ನು ಪ್ರಾರಂಭ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಈಗಾಗಲೇ ಶಿಕ್ಷಣ ಇಲಾಖೆ ಪ್ರಾರಂಭಿಕ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.

ಸದ್ಯಕ್ಕೆ 1 ರಿಂದ 5ನೆ ತರಗತಿ ಶಾಲೆಗಳನ್ನು ಪ್ರಾರಂಭ ಮಾಡದೆ ಕೇವಲ 6 ರಿಂದ 10ನೆ ತರಗತಿವರೆಗೆ ಮಾತ್ರ ಶಾಲೆಗಳನ್ನು ಪ್ರಾರಂಭ ಮಾಡುವುದು, ಜತೆಗೆ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆಯೊಂದಿಗೆ 6 ರಿಂದ 10ನೆ ತರಗತಿ ಪ್ರಾರಂಭ ಮಾಡುವ ಸಾಧ್ಯತೆಯಿದೆ.

ಪಾಳಿ ವ್ಯವಸ್ಥೆಯಲ್ಲಿ ಶಾಲೆಗಳನ್ನು ಪ್ರಾರಂಭಿಸಿ, ಈ ಮೂಲಕ ಮಕ್ಕಳ ಸಂಖ್ಯೆ ಕಡಿಮೆ ಮಾಡಿ ಪಾಠ-ಪ್ರಚವನ ಮಾಡುವ ಸಂಭವವಿದೆ.ಬ್ಯಾಚ್‍ಗಳ ಮಾದರಿಯಲ್ಲಿ ಶಾಲೆಗಳ ಪ್ರಾರಂಭ ಮಾಡುವುದುದು. (3 ದಿನ ಒಂದು ಬ್ಯಾಚ್, ಮತ್ತೆ 3 ದಿನ ಮತ್ತೊಂದು ಬ್ಯಾಚ್ ಮಾಡಿ) ತರಗತಿ ಪ್ರಾರಂಭಿಸುವುದು. ಕೊರೊನಾ ಸೋಂಕು ಕಡಿಮೆ ಆಗುವವರೆಗೂ ಶಿಕ್ಷಣ ಇಲಾಖೆ ಚಾನೆಲ್ ಪ್ರಾರಂಭ ಮಾಡಿ.

(ದೂರದರ್ಶನ) ತರಗತಿಗಳನ್ನು ಆಯೋಜನೆ ಮಾಡಿ ಶಿಕ್ಷಣ ನೀಡಲು ಚಿಂತನೆ ನಡೆದಿದೆ. ಮಾರ್ಚ್ 16ರಿಂದಲೇ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಲಾಗಿದೆ. ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಹೀಗೆ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ.

ಲಾಕ್‍ಡೌನ್ ಜಾರಿಯಲ್ಲಿದ್ದರೂ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ಈಗಾಗಲೇ ದೇಶದಲ್ಲಿ ವೈರಾಣು ಪೀಡಿತರ ಸಂಖ್ಯೆ ಒಂದು ಲಕ್ಷ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿಹೆಚ್ಚು ಕೊರೊನಾ ಕೇಸುಗಳಿರುವ ಪಟ್ಟಿಯಲ್ಲಿ ಭಾರತವು 10ನೆ ಸ್ಥಾನಕ್ಕೆ ಏರಿದೆ.

Facebook Comments

Sri Raghav

Admin