ಇದೇ ತಿಂಗಳ 25ರಂದು 1 ರಿಂದ 5 ನೇ ತರಗತಿಗಳು ಆರಂಭ, ಇಲ್ಲಿದೆ ಮಾರ್ಗಸೂಚಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು- : ಕೋವಿಡ್ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿದ್ದ 1ರಿಂದ 5 ನೇ ತರಗತಿಗಳು ಇದೇ ದಿನಾಂಕ 25ರಿಂದ ರಾಜ್ಯಾದ್ಯಂತ ಪ್ರಾರಂಭವಾಗಲಿವೆ. ರಾಜ್ಯದಲ್ಲಿ ಕೊರೋನಾ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದ್ದರಿಂದ ಶಾಲೆ ಆರಂಭಿಸುವುದಕ್ಕೆ ಶಿಕ್ಷಣ ಇಲಾಖೆ ತೀರ್ಮಾನಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾಹಿತಿ ನೀಡಿದ್ದಾರೆ.

ಜೊತೆಗೆ ಶಿಕ್ಷಣ ಇಲಾಖೆಯು ‌ ಮಾರ್ಗಸೂಚಿ ಹೊರಡಿಸಿದ್ದು,ಅದರಂತೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಅನುಮತಿ ಕಡ್ಡಾಯ. ಮಕ್ಕಳಿಗೆ ಶಾಲೆ ಹಾಜರಾತಿ ಕಡ್ಡಾಯವಿಲ್ಲ ಎಂದು ‌ ಸ್ಪಷ್ಟಪಡಿಸಲಾಗಿದೆ.ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು. ಸದ್ಯಕ್ಕೆ ತರಗತಿಯಲ್ಲಿ ಶೇಕಡ 50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗಿದೆ. ತರಗತಿಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಫೇಸ್ ಶೀಲ್ಡ್ ಕಡ್ಡಾಯ. ಅರ್ಧ ದಿನ ಮಾತ್ರ ತರಗತಿ ನಡೆಸಲಾಗುತ್ತದೆ.

ಜಿಲ್ಲೆಗಳಲ್ಲಿ ಮತ್ತು ಗಡಿ ಭಾಗಗಳಲ್ಲಿ ಸದ್ಯದ ಕೋವಿಡ್‌ ದೃಢ ಪ್ರಮಾಣವನ್ನು ಅವಲೋಕಿಸಿದ ಬಳಿಕ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸಲು ಸಮಿತಿ ಅನುಮತಿ ನೀಡಲಾಗಿದೆ.ಒಂದು ವಾರಕ್ಕೂ ಮೊದಲೇ ಮಕ್ಕಳಿಗೆ ಕೋವಿಡ್ ಮಾರ್ಗಸೂಚಿ ಕುರಿತು ತರಬೇತಿ ನೀಡಲಾಗುವುದು.1-5ನೇ ತರಗತಿ ಮಕ್ಕಳಿಗೆ ಅರ್ಧ ಮಾತ್ರ ಪಾಠ-ಪ್ರವಚನ ನಡೆದರೆ,ನವೆಂಬರ್ 1 ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭವಾಗಲಿವೆ.

ಒಂದು ವೇಳೆ ಲಸಿಕೆ ನೀಡುವುದೇ ಆದಲ್ಲಿ ಶಾಲೆಯಲ್ಲಿಯೇ ಮಕ್ಕಳಿಗೆ ಲಸಿಕೆ ನೀಡಲು ಅವಕಾಶ ಕಲ್ಪಿಸಲಾಗುವುದು. ಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳಬೇಕಾದರೆ ಪೋಷಕರ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ತಜ್ಞರ ಸಮಿತಿ ನೀಡಿರುವ ಶಿಫಾರಸುಗಳನ್ನು ಎಲ್ಲಾ ಶಾಲೆಗಳು ಚಾಚು ತಪ್ಪದೇ ಪಾಲಿಸಬೇಕು. ಮಕ್ಕಳ ಆರೋಗ್ಯ ರಕ್ಷಣೆ ಜತೆಗೆ ಶಿಕ್ಷಣವೂ ಅಷ್ಟೇ ಮಖ್ಯ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ.

Facebook Comments

Sri Raghav

Admin