BIG NEWS : ಫೆ.22ರಿಂದ ರಾಜ್ಯದಲ್ಲಿ ಎಲ್ಲಾ ಶಾಲೆ-ತರಗತಿಗಳು ಓಪನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.16- ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಸರ್ಕಾರ ನಿರ್ಧರಿಸಿದೆ. ಫೆ.22ರಿಂದ 6ರಿಂದ 8ನೇ ತರಗತಿಯವರೆಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಇಂದು ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. 1ರಿಂದ 5ರವರೆಗಿನ ತರಗತಿಗಳನ್ನು ವಿದ್ಯಾಗಮ ಯೋಜನೆಯಡಿ ತೆರೆಯಲು ಚಿಂತಿಸಲಾಗಿದ್ದು, ಸಾಧಕ-ಬಾಧಕಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಈ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವ ಚಿಂತನೆ ನಡೆಸಲಾಗಿದೆ.

ಕೋವಿಡ್ ತಾಂತ್ರಿಕ ಸಮಿತಿ ಸಲಹೆ ನೀಡಿದ ಹಿನ್ನೆಲೆಯಲ್ಲಿ 6ರಿಂದ 8ರವರೆಗಿನ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಸೋಮವಾರದಿಂದಲೇ ಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ 9-10 ಹಾಗೂ ಪಿಯುಸಿ, ಡಿಪ್ಲೊಮೊ, ಪದವಿ, ಸ್ನಾತಕೋತ್ತರ ಶಿಕ್ಷಣದ ತರಗತಿಗಳು ನಡೆಯುತ್ತಿದ್ದು, 1ರಿಂದ 8ನೇ ತರಗತಿವರೆ ಶಾಲೆಗಳು ಇನ್ನು ಆರಂಭಗೊಂಡಿರಲಿಲ್ಲ. ಕೊರೊನಾ ಕ್ಷೀಣಿಸುತ್ತಿದ್ದು ಶಾಲೆಗಳನ್ನು ಆರಂಭಿಸಬೇಕೆಂದು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಪೋಷಕರಿಂದಲೂ ಒತ್ತಡ ಕೇಳಿಬಂದಿತ್ತು.

ಆರೋಗ್ಯ ಇಲಾಖೆ, ಕೋವಿಡ್ ತಾಂತ್ರಿಕ ಸಮಿತಿ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಶಿಕ್ಷಣ ಸಚಿವರಾದ ಸುರೇಶ್‍ಕುಮಾರ್ ಅವರು ಸುಧೀರ್ಘ ಸಮಾಲೋಚನೆ, ಸಭೆಗಳನ್ನು ನಡೆಸಿದ್ದರು. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕೂಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಾಲೆಗಳನ್ನು ಆರಂಭಿಸಬಹುದೆಂಬ ಸಲಹೆಯನ್ನು ನೀಡಿತ್ತು. ಆ ಹಿನ್ನೆಲೆಯಲ್ಲಿ ಫೆ.22ರಿಂದ 6ರಿಂದ 8ನೇ ತರಗತಿಗಳನ್ನು ಪೂರ್ಣಪ್ರಮಾಣದ ಶಾಲೆ ಹಾಗೂ 1ರಿಂದ 5ರವರೆಗೆ ವಿದ್ಯಾಗಮ ಶಾಲೆಗಳನ್ನು ಆರಂಭಿಸಲು ನಿರ್ಧಾರ ಮಾಡಲಾಗಿದೆ.

ವಿದ್ಯಾಗಮ ನೋಡಿಕೊಂಡು ನಂತರ ಪ್ರಾಥಮಿಕ ಶಾಲೆಗಳ ಪೂರ್ಣ ಪ್ರಮಾಣದ ತರಗತಿಗಳನ್ನು ಆರಂಭಿಸುವ ಬಗ್ಗೆಯೂ ಕೂಡ ಸದ್ಯದಲ್ಲಿಯೇ ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ವಿದ್ಯಾಗಮ ಶಾಲೆಗಳ ಆರಂಭದ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿತ್ತು.

ಹಲವು ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಹಾಗಾಗಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕೆಂದು ಆರೋಗ್ಯ ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದೆ. ಈಗಾಗಲೇ 9ರಿಂದ 12ರವರೆಗಿನ ಶಾಲಾ ಕಾಲೇಜುಗಳು ಹಾಗೂ ಪದವಿ ಕಾಲೇಜುಗಳು ನಡೆಯುತ್ತಿದ್ದು, ಕೊರೊನಾ ಸೋಂಕಿನ ಭೀತಿ ಅಷ್ಟಾಗಿ ಕಾಡುತ್ತಿಲ್ಲ. ಹಾಗಾಗಿ 6ರಿಂದ 8ರವರೆಗಿನ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಬಹುದೆಂಬ ನಿರ್ಧಾರಕ್ಕೆ ಬರಲಾಗಿದೆ. ಹಂತ ಹಂತವಾಗಿ 1ರಿಂದ 5ನೇ ತರಗತಿಗಳನ್ನು ನಡೆಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

Facebook Comments