ಈಚರ್ ವಾಹನಕ್ಕೆ ಸ್ಕೂಟರ್ ಡಿಕ್ಕಿ; ಇಬ್ಬರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.24- ಮುಂದೆ ಚಲಿಸುತ್ತಿದ್ದ ಈಚರ್ ವಾಹನಕ್ಕೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸಾವನ್ನಪ್ಪಿರುವ ಘಟನೆ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಕುಮಾರ್ ಲಿಂಬೋ(24) ಮತ್ತು ಸುನೀಲ್ ಚಾತ್ರಿ(24) ಮೃತಪಟ್ಟವರು.

ಪೇಂಟರ್ ವೃತ್ತಿ ಮಾಡುತ್ತಿದ್ದ ಇವರಿಬ್ಬರು ಲಗ್ಗೆರೆಯಲ್ಲಿ ಸ್ನೇಹಿತರೊಂದಿಗೆ ರೂಮ್ ಮಾಡಿಕೊಂಡಿದ್ದರು. ಬಾಡಿಗೆಗೆ ಸ್ಕೂಟರ್ ಪಡೆದುಕೊಂಡು ಮಧ್ಯರಾತ್ರಿ 11.45ರ ಸುಮಾರಿನಲ್ಲಿ ಇವರಿಬ್ಬರು ಸ್ಕೂಟರ್‍ನಲ್ಲಿ ಲಗ್ಗೆರೆಯಿಂದ ಗೊರಗುಂಟೆಪಾಳ್ಯ ಕಡೆಗೆ ಹೋಗುತ್ತಿದ್ದರು. ರಾಜ್‍ಕುಮಾರ್ ಸಮಾಧಿ ಬಳಿ ಇದೇ ಮಾರ್ಗದಲ್ಲಿ ಮುಂದೆ ಚಲಿಸುತ್ತಿದ್ದ ಈಚರ್ ವಾಹನಕ್ಕೆ ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಂದ ಸ್ಕೂಟರ್ ಡಿಕ್ಕಿ ಹೊಡೆದಿದೆ.

ಪರಿಣಾಮ ಬೈಕ್ ಸವಾರರಿಬ್ಬರೂ ಕೆಳಗೆ ಬಿದ್ದಿದ್ದು ಗಂಭೀರ ಗಾಯಗೊಂಡ ಸವಾರ ಲಿಂಬೋ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಹಿಂಬದಿ ಸವಾರ ಸುನೀಲ್ ಚಾತ್ರಿ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ರಾಜಾಜಿನಗರದ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಶಿವರತ್ನ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತ ದೇಹಗಳನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ.

Facebook Comments