ಕಾಶ್ಮೀರದ 370ನೇ ವಿಧಿ ರದ್ದುಪಡಿಸಿರುವುದು ಐತಿಹಾಸಿಕ ಕ್ರಮ : ಸೇನಾ ಮುಖ್ಯಸ್ಥ ನರವಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.15- ಕಣಿವೆ ರಾಜ್ಯ ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದು ಐತಿಹಾಸಿಕ ಕ್ರಮ ಎಂದು ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಬಣ್ಣಿಸಿದ್ದಾರೆ.ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿರುವುದು ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ ನಮ್ಮ ಮೇಲೆ ನಡೆಸುತ್ತಿದ್ದ ಕಪಟ ಯುದ್ಧವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ನವದೆಹಲಿಯಲ್ಲಿ ನಡೆದ 72ನೇ ಸೇನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 370ನೇ ವಿಧಿ ರದ್ದು ಮಾಡಿರುವುದರಿಂದ ಕಣಿವೆ ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಈ ರಾಜ್ಯವನ್ನು ಸಹ ಮುಖ್ಯ ವಾಹಿನಿಗೆ ತರಲು ಅನುಕೂಲವಾಗಲಿದೆ ಎಂದರು.

ಭಯೋತ್ಪಾದನೆ ವಿರುದ್ಧದ ಸೇನಾ ಹೋರಾಟದಲ್ಲಿ ಶೂನ್ಯ ಸಹಿಷ್ಣುತೆ ನಮ್ಮ ಗುರಿಯಾಗಿದೆ. ಭಯೋತ್ಪಾದನೆಗೆ ಯಾರೇ ಕುಮ್ಮಕ್ಕು ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಮುಂದೆ ಅನೇಕ ಆಯ್ಕೆಗಳಿವೆ. ಅದನ್ನು ಬಳಸಲು ನಾವು ಹಿಂಜರಿಯುವುದಿಲ್ಲ ಎಂದು ನರವಣೆ ಎಚ್ಚರಿಕೆ ನೀಡಿದರು. ಭವಿಷ್ಯದಲ್ಲಿ ಎದುರಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸೇನೆ ಸರ್ವಸನ್ನದ್ದವಾಗಿದೆ.

ನಾವು ಸೇನೆಯ ಸಾಮಥ್ರ್ಯವನ್ನು ವಿಶ್ವದ ಮುಂದೆ ಅನಾವರಣಗೊಳಿಸುವ ಸಂದರ್ಭ ಬಂದರೆ ಅದಕ್ಕೂ ಸಿದ್ದ ಎಂದರು. ವಾಯುಪಡೆ ಮುಖ್ಯಸ್ಥ ಮಾರ್ಷಲ್ ಆರ್.ಕೆ.ಎಸ್.ಬಡೋರಿಯಾ , ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಕರಂಬೀರ್‍ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಪ್ರತಿ ವರ್ಷ ಜ.15ರಂದು ಸೇನಾ ದಿನಾಚರಣೆ ಎಂದು ಆಚರಿಸಲಾಗುತ್ತದೆ. ದೇಶದ ಮೊಟ್ಟಮೊದಲ ಲೆಫ್ಟಿನೆಂಟ್ ಜನರಲ್ ಕೆ.ಎಂ.ಕಾರ್ಯಪ್ಪ ಅವರು 1949, ಜನವರಿ 15ರಂದು ಭಾರತದಲ್ಲಿ ಬ್ರಿಟಿಷ್ ಕಮಾಂಡರ್ ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಬಟ್ಜರ್ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಈ ಐತಿಹಾಸಿಕ ದಿನವನ್ನು ಸೇನಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

Facebook Comments

Sri Raghav

Admin