ಬೆಂಗಳೂರು ಗಲಭೆ ಹಿಂದೆ ಎಸ್‍ಡಿಪಿಐ-ಕೆಎಫ್‍ಡಿ ನೇರ ಕೈವಾಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.12-ಕಳೆದ ರಾತ್ರಿ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಕೋಮುಗಲಭೆಯಲ್ಲಿ ಎಸ್‍ಡಿಪಿಐ ಮತ್ತು ಕೆಎಫ್‍ಡಿ ಸಂಘಟನೆಗಳ ನೇರ ಕೈವಾಡವಿದ್ದು, ತಪ್ಪಿತಸ್ಥರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಬಿಜೆಪಿ ಘಟಕ ಸರ್ಕಾರವನ್ನು ಒತ್ತಾಯಿಸಿದೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಮತ್ತು ಎಸ್ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರುಗಳು, ಘಟನೆಯಲ್ಲಿ ಭಾಗಿಯಾದ ದುಷ್ಕರ್ಮಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅಶ್ವಥ್ ನಾರಾಯಣ ಮಾತನಾಡಿ, ನಿನ್ನೆ ನಡೆದ ಘಟನೆ ಮೇಲ್ನೋಟಕ್ಕೆ ಪೂರ್ವ ನಿಯೋಜಿತ ದುಷ್ಕøತ್ಯವೆಂದು ಕಂಡುಬಂದಿದೆ. ಎಸ್‍ಡಿಪಿಐ ಮತ್ತು ಕೆಎಫ್‍ಡಿ ಸಂಘಟನೆಯ ಕೆಲ ಮುಖಂಡರು ನೇರವಾಗಿ ಭಾಗಿಯಾಗಿರುವ ಸಂಶಯವಿದೆ.

ಕೂಡಲೇ ಸರ್ಕಾರ ಇಂಥವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಸಬೇಕು. ಪ್ರಾರಂಭದಲ್ಲೇ ಇಂತಹ ದುಷ್ಟಶಕ್ತಿಗಳನ್ನು ಬಗ್ಗುಬಡಿಯದಿದ್ದರೆ ಮುಂದೆ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದರು. ಈ ಹಿಂದೆ ಚಾಮರಾಜಪೇಟೆಯ ಪಾದರಾಯನಪುರದಲ್ಲಿ ಕೆಲವು ಗೂಂಡಾಗಳು ಕೊರೊನಾ ವಾರಿಯರ್ಸ್ ಮೇಲೆ ಇದೇ ರೀತಿ ಹಲ್ಲೆ ನಡೆಸಿದ್ದರು.

ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವರು ವ್ಯವಸ್ಥಿತವಾದ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ದೂರಿದರು.

ಗಲಭೆ ಸಂಭವಿಸುವ ಮುನ್ನ ನಿನ್ನೆ ಮೂರು ಕಡೆ ಕೆಲವರು ಸಭೆ ನಡೆಸಿರುವುದು ಬೆಳಕಿಗೆ ಬಂದಿದೆ. ನಾಗವಾರ ರಸ್ತೆಯಲ್ಲಿರುವ ಕಾಲೇಜು, ವೆಂಕಟೇಶ್ವರ ರಸ್ತೆ ಮತ್ತು ಡಿಜೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತ್ತಿಯಲ್ಲಿ ಮತ್ತೊಂದು ಕಡೆ ಸಭೆ ನಡೆಸಿ ವ್ಯವಸ್ಥಿತವಾಗಿ ಗಲಭೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸುಮಾರು 700ರಿಂದ 800 ಜನರು ಸೇರಿಕೊಂಡೇ ಈ ಗಲಭೆ ಸೃಷ್ಟಿಸಿದ್ದಾರೆ. ಮನೆಗಳಿಗೂ ನುಗ್ಗಿ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕರ ಆಸ್ತಿಪಾಸ್ತಿಗಳಿಗೂ ಹಾನಿ ಮಾಡಲಾಗಿದೆ. ಕೆಎಫ್‍ಡಿ ಮತ್ತು ಎಸ್‍ಡಿಪಿಐ ಇದರಲ್ಲಿ ಶಾಮೀಲಾಗಿರುವುದರಿಂದ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಲು ಸರ್ಕಾರ ಹಿಂದೆಮುಂದೆ ನೋಡಬಾರದು ಎಂದು ಅಶ್ವಥ್ ನಾರಾಯಣ ಒತ್ತಾಯಿಸಿದರು.

ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲೇ ಕೋಮುಗಲಭೆ ಸಂಭವಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಕಾರದಲ್ಲಿದ್ದ ವೇಳೆಯೂ ಇಂತಹ ಕೋಮುಗಲಭೆ ಸಂಭವಿಸಿದೆ. ಯಾರೇ ಆಗಲಿ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಅವರನ್ನು ಸುಮ್ಮನೆ ಬಿಡಬಾರದು.

ಇದರಲ್ಲಿ ಡ್ರಗ್ ಮಾಫಿಯಾ, ಆಯಿಲ್ ಮಾಫಿಯಾಗಳ ಕೈವಾಡವೂ ಇರಬಹುದೆಂದು ಅಶ್ವಥ್ ನಾರಾಯಣ ಸಂಶಯ ವ್ಯಕ್ತಪಡಿಸಿದರು.  ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಉತ್ತರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೋಮುಗಲಭೆ ಸೃಷ್ಟಿಸಿದ ದುಷ್ಕರ್ಮಿಗಳ ವಿರುದ್ಧ ಯಾವ ರೀತಿ ಕ್ರಮ ಜರುಗಿಸಿದ್ದಾರೋ ಅದೇ ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸಬೇಕು ಎಂದು ಹೇಳಿದರು.

ಗಲಭೆ ಸೃಷ್ಟಿಸಲು ಕಾರಣರಾದವರು ಹಾಗೂ ಸಾರ್ವಜನಿಕರ ಆಸ್ತಿಯನ್ನು ಹಾಳು ಮಾಡಿದವರಿಂದಲೇ ಹಣ ವಸೂಲಿ ಮಾಡಲು ಸರ್ಕಾರ ಮುಂದಾಗಬೇಕು. ಶಾಸಕರ ಮೇಲೆ ಈ ರೀತಿ ನಡೆದುಕೊಂಡರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.

Facebook Comments

Sri Raghav

Admin