ಡಿಜೆಹಳ್ಳಿ-ಕೆಜಿಹಳ್ಳಿ ಗಲಭೆಯಲ್ಲಿ ಎಸ್‍ಡಿಪಿಐ ಸಂಘಟನೆ ಶಾಮೀಲು : ಗೃಹ ಸಚಿವ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.13- ರಾಜಧಾನಿ ಬೆಂಗಳೂರಿನ್ನೇ ಬೆಚ್ಚಿಬೀಳಿಸಿದ್ದ ಡಿಜೆಹಳ್ಳಿ-ಕೆಜಿಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್‍ಡಿಪಿಐ ಸಂಘಟನೆ ಶಾಮೀಲಾಗಿದ್ದು, ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಸಿದ್ದಾರೆ.

ಮೊನ್ನೆ ನಡೆದ ಗಲಭೆಯಲ್ಲಿ ಎಸ್ಡಿಪಿಐ ಸಂಘಟನೆಯ ಕಾರ್ಯಕರ್ತರು , ಪದಾಕಾರಿಗಳು ಹಾಗೂ ಮುಖಂಡರು ಶಾಮೀಲಾಗಿರುವುದಕ್ಕೆ ಸಾಕ್ಷಿಗಳನ್ನು ಸಂಗ್ರಹಿಸಿದ್ದೇವೆ. ಈಗಾಗಲೇ ನಾಲ್ವರು ಪ್ರಮುಖ ಆರೋಪಿಗಳನ್ನು ಸಹ ಬಂಧಿಸಿ ದ್ದೇವೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮುಖ ಆರೋಪಿಯಾದ ಅಬ್ಬಾಸ್(ಎ1), ಫೈರೋಜ್(ಎ2), ಮುಜಾಮಲ್(ಎ3), ಹಬೀಬ್(ಎ4) ಅವರುಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಇವರಿಂದ ಕೆಲವು ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ ಎಂದರು.

ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ನಾನು ಹೆಚ್ಚಿನ ಮಾಹಿತಿ ಬಹಿರಂಗಪಡಿಸುವುದಿಲ್ಲ. ಈ ಘಟನೆಗೆ ಎಸ್ಡಿಪಿ ಪಾತ್ರ ಇರುವುದು ಬೆಳಕಿಗೆ ಬಂದಿದೆ. ಸಂಪೂರ್ಣ ತನಿಖೆ ಮುಗಿದ ನಂತರ ಇನ್ನು ಕೆಲವು ಮಾಹಿತಿಗಳು ಹೊರಬೀಳಲಿವೆ ಎಂದು ತಿಳಿಸಿದರು.

ಈ ಹಿಂದೆ ಮೈಸೂರು, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ನಡೆದ ಕೋಮುಗಲಭೆಯಲ್ಲಿ ಈ ಸಂಘಟನೆಗಳ ಪಾತ್ರದ ಕುರಿತಂತೆ ತನಿಖೆಯನ್ನು ನಡೆಸಲಿದ್ದೇವೆ. ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಹಲವರಿಂದ ಒತ್ತಡ ಬರುತ್ತಿದೆ.

ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಇಲಾಖೆ ಮುಖ್ಯಸ್ಥರು, ಕಾನೂನು ಇಲಾಖೆ ಸೇರಿದಂತೆ ಹಲವರ ಜೊತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡ ಮೇಲೆ ಪ್ರಕರಣದ ಬಗ್ಗೆ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಕೆಲ ರಾಜಕೀಯ ಪಕ್ಷಗಳ ಮುಖಂಡರ ನಡುವೆ ಇರುವ ವೈಮನಸ್ಸು ಬೆರೆ ಬೇರೆ ಪಕ್ಷದಲ್ಲಿನ ಮುಖಂಡರ ಭಿನ್ನಾಭಿಪ್ರಾಯವು ಘಟನೆಗೆ ಕಾರಣವಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.

ಯಾರೇ ಆಗಲಿ, ಎಷ್ಟೇ ದೊಡ್ಡವರಿರಲಿ, ಎಷ್ಟೇ ಪ್ರಭಾವಿಗಳಾಗಿರ ಕಾನೂನು ರೀತಿ ಕ್ರಮವನ್ನು ಜರುಗಿಸುತ್ತೇವೆ. ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ. ತಪ್ಪಿಸ್ಥರ ಮೇಲೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ ಎಂದು ಹೇಳಿದರು.

ಗಲಭೆ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿಯನ್ನು ಅಪಾರ ಪ್ರಮಾಣದಲ್ಲಿ ಹಾಳು ಮಾಡಲಾಗಿದೆ. ದ್ವಿಚಕ್ರ ವಾಹನಗಳು, ಪೊಲೀಸರಿಗೆ ಸೇರಿದ ವಾಹನಗಳು, ಸಾರ್ವಜನಿಕರ ವಾಹನಗಳು ಸೇರಿದಂತೆ ಬೇರೆ ಬೇರೆ ಸ್ವರೂಪದ ವಸ್ತುಗಳನ್ನು ಹಾಳು ಮಾಡಿದ್ದಾರೆ.

ಸಾರ್ವಜನಿಕರ ಆಸ್ತಿಯನ್ನು ಹಾಳು ಮಾಡುವವರಿಂದ ವಸೂಲಿ ಮಾಡುವ ಸಂಬಂಧ ಸುಪ್ರೀಂಕೋರ್ಟ್ ನೀಡಿದೆ. ಅದೇ ಪ್ರಕಾರವೇ ತಪ್ಪಿತಸ್ಥರಿಂದಲೇ ವಸೂಲಿ ಮಾಡಲಾಗುವುದು. ಈಗಾಗಲೇ ಪ್ರಕ್ರಿಯೆಯೂ ಸಹ ಆರಂಭವಾಗಿದೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದೆಂದರೆ ಕಠಿಣ ಕ್ರಮ ಖಚಿತ ಎಂದು ಹೇಳಿದರು. ಕೊರೊನಾದಂತಹ ಸಂದರ್ಭದಲ್ಲೂ ಪೊಲೀಸರು ತಮ್ಮ ಪ್ರಾಣವನ್ನು ಬದಿಗೊತ್ತಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.

ಅವರ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ಬಹುದೊಡ್ಡ ಸಂಚನ್ನು ವಿಫಲಗೊಳಿಸಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಶಾಸಕ ಜಮೀರ್ ಅಹಮ್ಮದ್ ತಮ್ಮ ನಿಲುವು ಏನೆಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಇಂಥ ಸಂದರ್ಭದಲ್ಲಿ ಯಾರೊಬ್ಬರೂ ಪ್ರಚೋದನಾಕಾರಿ ಹೇಳಿಕೆ ನೀಡಬೇಕಾದ ಅಗತ್ಯವಿಲ್ಲ ಎಂದರು.

ಗಲಭೆ ಸಂಭವಿಸಿದ ಕೆಜಿಹಳ್ಳಿ ಮತ್ತು ಡಿಜೆಹಳ್ಳಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರು ಆತಂಕಕ್ಕೊಳಗಾಗಬಾರದೆಂದು ಬೊಮ್ಮಾಯಿ ಮನವಿ ಮಾಡಿದರು.

Facebook Comments

Sri Raghav

Admin