ಭಾರತದ ಪ್ರಥಮ ಸೀಪ್ಲೇನ್ ಸೇವೆ ಆರಂಭ, ಗುಜರಾತ್‍ನಲ್ಲಿ 17 ಯೋಜನೆಗಳಿಗೆ ಪ್ರಧಾನಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಕೆವಾಡಿಯಾ (ಗುಜರಾತ್), ಅ.31- ಭಾರತದ ಪ್ರಪ್ರಥಮ ಸಾಗರ ವಿಮಾನ (ಸಿ ಪ್ಲೇನ್ ಸೇವೆ) ಇಂದಿನಿಂದ ಆರಂಭವಾಗಿದ್ದು, ಗುಜರಾತ್‍ನ ನರ್ಮದಾ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿನೂತನ ಪ್ರವಾಸೋದ್ಯಮಕ್ಕೆ ಚಾಲನೆ ನೀಡಿದರು. ಭಾರತದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 145ನೆ ಜನ್ಮ ಜಯಂತಿ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸೀ ಪ್ಲೇನ್ ಆರಂಭಕ್ಕೆ ಮೋದಿ ಚಾಲನೆ ನೀಡಿದರು.

ಅಹಮದಾಬಾದ್‍ನಿಂದ ಕೆವಾಡಿಯಾಗೆ ಸಂಪರ್ಕ ಕಲ್ಪಿಸುವ ಪ್ರಥಮ ಸಾಗರ್ ವಿಮಾನ ಯಶಸ್ವಿಯಾಗಿ ಕಾರ್ಯಾರಂಭ ಮಾಡಿದೆ. ಸಬರಮತಿ ಆಶ್ರಮದಿಂದ ಏಕತಾ ಪ್ರತಿಮೆಗೆ ಈ ಸಾಗರ ವಿಮಾನ ಸಂಪರ್ಕ ಕಲ್ಪಿಸಲಿದೆ.  ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಗುಜರಾತ್ ಭೇಟಿ ವೇಳೆ ಒಟ್ಟು 17 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಕೃಷಿ, ವೈದ್ಯಕೀಯ, ಪ್ರವಾಸೋದ್ಯಮ ಮತ್ತು ಆಡಳಿತ ಕ್ಷೇತ್ರಗಳಿಗೆ ಸಂಬಂಧಿಸಿದ ಮಹತ್ವದ ಯೋಜನೆಗಳು ಇವಾಗಿವೆ.

ಪ್ರಧಾನಿ ಅವರು ನಿನ್ನೆ ಆರೋಗ್ಯವನ, ಏಕತಾ ಮಾಲ್, ಮಕ್ಕಳ ಪುಷ್ಟಿದಾಯಕ ಉದ್ಯಾನವನ, ಪಟೇಲರ ಜೈವಿಕ ಉದ್ಯಾನ, ಸಫಾರಿ ಪಾರ್ಕ್ ಸೇರಿದಂತೆ ಒಟ್ಟು 17 ಯೋಜನೆಗಳನ್ನು ಸಮರ್ಪಿಸಿದ್ದಾರೆ.

ಇಂದು ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಐಎಎಸ್ ಪ್ರೊಬೆಷನರಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸರ್ಕಾರಿ ಸೇವಕರು ಕೈಗೊಳ್ಳುವ ನಿರ್ಧಾರಗಳು ಜನರ ಹಿತಾಸಕ್ತಿಗೆ ಒಳಿತಾಗುವಂತಿರಬೇಕು ಜತೆಗೆ ದೇಶದ ಏಕತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವಂತಿರಬೇಕು ಎಂದು ಸಲಹೆ ಮಾಡಿದರು.

Facebook Comments