ದೇಶದ 12 ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಪ್ರಾಯೋಗಿಕ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.19- ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಕೋವ್ಯಾಕ್ಸಿನ್ ಲಸಿಕೆಯನ್ನು ಮಾನವನ ಮೇಲಿನ ಪ್ರಯೋಗಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಎಐಐಎಂಎಸ್) ಅನುಮತಿ ನೀಡಿದೆ.

ಕೋವ್ಯಾಕ್ಸಿನ್‍ನ ಮೊದಲ ಹಂತ ಹಾಗೂ ಎರಡನೆ ಹಂತದಲ್ಲಿ ಮಾನವನ ಮೇಲೆ ಲಸಿಕೆ ಪ್ರಯೋಗಕ್ಕೆ ದೇಶದ 12 ಕೇಂದ್ರಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ 375 ಸ್ವಯಂಸೇವಕರ ಮೇಲೆ ನಡೆಯಲಿದೆ. ದೆಹಲಿಯ ಏಮ್ಸ್‍ನಲ್ಲಿಯೇ 100 ಮಂದಿಗೆ ಲಸಿಕೆ ನೀಡಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಈ ಕುರಿತು ಮಂಡಳಿಯ ಉಸ್ತುವಾರಿ ಸಮಿತಿ ಕೆಲವೊಂದು ಮಾರ್ಗಸೂಚಿಗಳನ್ನು ಕೂಡ ನೀಡುತ್ತಿದ್ದು, ಇದು ಹೊಸ ಆಶಾಕಿರಣ ಮೂಡಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

18 ವರ್ಷಕ್ಕಿಂತ ಹೆಚ್ಚು ಮತ್ತು 55 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಏಮ್ಸ್‍ನ ಸಮುದಾಯ ಔಷಧ ಕೇಂದ್ರದ ಪ್ರಾಧ್ಯಾಪಕ ಡಾ.ಸಂಜಯ್ ರೈ ಹೇಳಿದ್ದಾರೆ.

ಕೆಲವು ಸ್ವಯಂಸೇವಕರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ನಾವು ಲಸಿಕೆ ಹಾಕುವ ಮೊದಲು ವ್ಯಕ್ತಿಗಳ ತಪಾಸಣೆ ಪ್ರಾರಂಭಿಸುತ್ತೇವೆ ಮತ್ತು ಸೋಮವಾರದಿಂದ ಅವರ ಆರೋಗ್ಯ ಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತೇವೆ ಎಂದು ರಾಯ್ ಹೇಳಿದ್ದಾರೆ.

ಭಾರತದಲ್ಲಿ ಅಭಿವೃದ್ಧಿಪಡಿಸಿದ ಮೊದಲ ಸ್ಥಳೀಯ ಲಸಿಕೆ ಇದಾಗಿದ್ದು, ಇದರ ಫಲ ಸಿಗುವ ನಿರೀಕ್ಷೆ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

Facebook Comments

Sri Raghav

Admin