ಮಾಗಡಿಯಲ್ಲಿ ಎರಡು ಚಿರತೆಗಳ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ/ಮಾಗಡಿ, ಮೇ 17- ತಾಲ್ಲೂಕಿನ ಸಿಡಗನ ಪಾಳ್ಯ ಹಾಗೂ ಬೋಡಗನಪಾಳ್ಯದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಎರಡು ಚಿರತೆಗಳು ಸೆರೆಯಾಗಿವೆ. ಕೊತ್ತಗಾನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಚಿರತೆಯೊಂದು ಗಂಗಮ್ಮ ಎಂಬ ಮಹಿಳೆಯನ್ನು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಹನ್ನೊಂದು ಕಡೆ ಬೋನು ಇರಿಸಿತ್ತು.

ದಾಸಪ್ಪನಪಾಳ್ಯ ಬಳಿ ಶನಿವಾರ ರಾತ್ರಿ ಎರಡು ಚಿರತೆ ಮರಿಗಳು ಪತ್ತೆಯಾಗಿವೆ. ಸಾರ್ವಜನಿಕರು ಅವುಗಳನ್ನು ಹಿಡಿದು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ. ಸದ್ಯ ಈ ಎಲ್ಲ ಪ್ರಾಣಿಗಳನ್ನು ಮಾಗಡಿಯಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಮನೆಯಿಂದ ಯಾರೂ ಹೊರಗೆ ಮಲಗಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಜಿಲ್ಲಾಡಳಿತ ಗ್ರಾಮಸ್ಥರಲ್ಲಿ ಸೂಚನೆ ನೀಡಿದೆ. ರಾತ್ರಿಯಾದರೆ ಮಾಗಡಿಯ ಹಲವು ಗ್ರಾಮಗಳಲ್ಲಿ ಈಗ ಜನರು ಓಡಾಡಲು ಕೂಡ ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾವನದುರ್ಗ ಅರಣ್ಯ ಪ್ರದೇಶ ತೀರಾ ಹತ್ತಿರವಿರುವುದರಿಂದ ಮತ್ತು ಕಿರು ಅರಣ್ಯ ಪ್ರದೇಶಗಳು ಹೆಚ್ಚಾಗಿರುವುದರಿಂದ ಚಿರತೆಗಳು ಈಗ ಆಹಾರ ಅರಸಿ ನಾಡಿನತ್ತ ಲಗ್ಗೆ ಇಡುತ್ತಿದೆ ಎಂದು ಪರಿಸರವಾದಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಯಾವುದೇ ಕಾರಣಕ್ಕೂ ಒಂಟಿಯಾಗಿ ಓಡಾಡತಕ್ಕದ್ದಲ್ಲ. ಗುಂಪಾಗಿ ಚಲಿಸತಕ್ಕದ್ದು ಮತ್ತು ಸಂಜೆ 6 ಗಂಟೆಯೊಳಗೆ ಮನೆಗೆ ಸೇರುವುದು. ಬಯಲು ಬಹಿರ್ದೆಸೆಗೆ ಹೋಗಬಾರದು. ಚಿರತೆಯು ಕಂಡಲ್ಲಿ ಯಾವುದೇ ಕಾರಣಕ್ಕೂ ಹೆಚ್ಚು ಜನ ಸೇರಿ ಗದ್ದಲ ಮಾಡಬಾರದು.

ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ದನಗಳನ್ನು ಮೇಯಿಸಲು ಮತ್ತು ಹೊಲಕ್ಕೆ ಹೋದಾಗ ಬಯಲು ಪ್ರದೇಶದಲ್ಲಿ ಕುಳಿತುಕೊಳ್ಳಬೇಕು. ಪೊದೆಗಳ ಬಳಿ ಒಂಟಿಯಾಗಿ ಕೂರಬಾರದು ಹಾಗೂ ಚಿರತೆಯ ಬಗ್ಗೆ ಸದಾಕಾಲ ಎಚ್ಚರಿಕೆಯಿಂದ ಇರಬೇಕು.

ಸಂಜೆ ಆರು ಗಂಟೆಯ ನಂತರ ಎಲ್ಲಾ ಸಾಕು ಪ್ರಾಣಿಗಳನ್ನು ಮನೆ ಇಲ್ಲವೆ ಕೊಟ್ಟಿಗೆ ಒಳಗೆ ಕೂಡಿಹಾಕಬೇಕು. ಸಾಕು ಪ್ರಾಣಿಯನ್ನು ಚಿರತೆಯು ಹತ್ಯೆ ಮಾಡಿದಲ್ಲಿ ಅದನ್ನು ಮುಟ್ಟಬಾರದು ಮತ್ತು ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಇಂದು ತಿಳಿಸಿದೆ.

ಚಿರತೆಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ: 1926 ಅಥವಾ ರಾಮನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೊ.ನಂ. 9448381927ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಕೋರಿದ್ದಾರೆ.

Facebook Comments

Sri Raghav

Admin