ಲಾರಿ ರಿವರ್ಸ್ ತೆಗೆಯುವಾಗ ಅವಘಡ : ಸೆಕ್ಯೂರಿಟಿ ಗಾರ್ಡ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.24- ರೈಲ್ವೆ ಅಂಡರ್‍ಬ್ರಿಡ್ಜ್ ಕಾಮಗಾರಿ ಸ್ಥಳದಲ್ಲಿ ಇಬ್ಬರು ಸೆಕ್ಯೂರಿಟಿ ಗಾರ್ಡ್‍ಗಳು ಮಲಗಿರುವುದನ್ನು ಗಮನಿಸದೆ ಟಿಪ್ಪರ್ ಲಾರಿ ರಿವರ್ಸ್ ಪಡೆಯುತ್ತಿದ್ದಾಗ ಅವರ ಮೇಲೆ ಹರಿದ ಪರಿಣಾಮ ಒಬ್ಬರು ಮೃತಪಟ್ಟಿರುವ ಘಟನೆ ಎಚ್‍ಎಎಲ್ ಏರ್ಪೋರ್ಟ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ. ಜಾರ್ಖಂಡ್ ಮೂಲದ ಮಹೇಶ್ (24) ಮೃತಪಟ್ಟ ಸೆಕ್ಯುರಿಟಿ ಗಾರ್ಡ್.

ಮುನ್ನೇಕೊಳಾಲ ಬಳಿ ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಈ ಸ್ಥಳದಲ್ಲಿ ಕಾಮಗಾರಿಗೆ ಬೇಕಾದಂತಹ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟಿರುವುದರಿಂದ ಇಬ್ಬರು ಸೆಕ್ಯುರಿಟಿ ಗಾರ್ಡ್‍ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅದರಂತೆ ಜಾರ್ಖಂಡ್ ಮೂಲದ ಮಹೇಶ್ ಹಾಗೂ ಮತ್ತೊಬ್ಬ ಸೆಕ್ಯುರಿಟಿಗಾರ್ಡ್ ರಾತ್ರಿ ಪಾಳಿ ಕರ್ತವ್ಯಕ್ಕೆ ಬಂದಿದ್ದು ಬೆಳಗಿನ ಜಾವ ಇವರಿಬ್ಬರೂ ನಿದ್ದೆಗೆ ಜಾರಿದ್ದಾರೆ. 1.30ರ ಸುಮಾರಿನಲ್ಲಿ ಈ ರಸ್ತೆಯಲ್ಲಿ ಬಂದ ಟಿಪ್ಪರ್ ಲಾರಿ ಸೆಕ್ಯುರಿಟಿ ಗಾರ್ಡ್‍ಗಳು ಮಲಗಿರುವುದು ಗಮನಿಸದೆ ರಿವರ್ಸ್ ಪಡೆದುಕೊಳ್ಳುತ್ತಿದ್ದಾಗ ಅವರ ಮೇಲೆ ಹರಿದಿದೆ.

ಪರಿಣಾಮವಾಗಿ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಸೆಕ್ಯುರಿಟಿಗಾರ್ಡ್‍ನನ್ನು ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಚ್‍ಎಎಲ್ ಏರ್ಪೋರ್ಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments