ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಭಾರೀ ಭದ್ರತೆ
ಬೆಂಗಳೂರು,ಆ.12-ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ಕಳೆದ ರಾತ್ರಿ ನಡೆದ ಗಲಭೆ ಹಿನ್ನೆಲೆಯಲ್ಲಿ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಕೆಲವು ಸಂಘಟನೆಗಳ ದುಷ್ಕರ್ಮಿಗಳು ಅಖಂಡ ಶ್ರೀನಿವಾಸ್ಮೂರ್ತಿ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಗೃಹ ಇಲಾಖೆಗೆ ಸೂಚನೆ ಕೊಟ್ಟಿದೆ.
ಹೀಗಾಗಿ ಇಂದು ತಮ್ಮ ಕಾವೇರಿ ನಿವಾಸಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ಸೂದ್ ಮತ್ತು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರ ಜೊತೆ ಘಟನೆ ಸಂಬಂಧ ಮಾಹಿತಿ ಪಡೆದರು.
ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ದುಷ್ಕರ್ಮಿಗಳು ಯಾವುದೇ ಸಂದರ್ಭದಲ್ಲಿ ಹಲ್ಲೆ ನಡೆಸುವ ಸಾಧ್ಯತೆ ಇರುವುದರಿಂದ ತಕ್ಷಣವೇ ಅವರಿಗೆ ಬಿಗಿಭದ್ರತೆ ಒದಗಿಸುವಂತೆ ಸೂಚನೆ ಕೊಟ್ಟರು.
ಅವರ ನಿವಾಸ, ಕಚೇರಿ, ಸಂಬಂಕರು, ಪತ್ನಿ ಮತ್ತು ಮಕ್ಕಳು ಸೇರಿದಂತೆ ಮತ್ತಿತರರಿಗೆ ಭದ್ರತೆ ನೀಡಬೇಕೆಂದು ಸಿಎಂ ಯಡಿಯೂರಪ್ಪ ಪೊಲೀಸ್ ಇಲಾಖೆಗೆ ತಾಕೀತು ಮಾಡಿದರು.
ಈ ಹಿನ್ನೆಲೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಕುಟುಂಬದವರಿಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ.