ಅದ್ದೂರಿಯಾಗಿ ಲಾಂಚ್ ಆಯ್ತು ‘ಸೀತಾರಾಮ ಕಲ್ಯಾಣ’ ಚಿತ್ರದ ಟೀಸರ್

ಈ ಸುದ್ದಿಯನ್ನು ಶೇರ್ ಮಾಡಿ

CM--01

ರಾಮನಗರ,ಆ.1- ನನ್ನನ್ನು ಮತ್ತೆ ಗೆಲ್ಲಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಕರಿಸಿದ ಆರೂವರೆ ಕೋಟಿ ಜನರಿಗೆ ನಾನು ಋಣಿ. ಸರ್ವರಿಗೂ ಸಮಪಾಲು ನೀಡುವ ನಿಟ್ಟಿನಲ್ಲಿ ನಾನು ಕೆಲಸ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ನಗರದ ಕಾಲೇಜು ಆವರಣದಲ್ಲಿ ನಾಯಕ ನಟ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ರಾಮನಗರದಲ್ಲಿ ಮತ್ತೆ ಗೆದ್ದಿದ್ದೇನೆ. ಮತ ಕೇಳಲು ಬಂದಾಗ ಜನರನ್ನು ಭೇಟಿ ಮಾಡಿಲ್ಲ. ಈಗ ಅಧಿಕಾರ ವಹಿಸಿಕೊಂಡ ಮೇಲೆ ಒತ್ತಡವಿದೆ. ಕೆಲವರು ಐದು ಜಿಲ್ಲೆಗೆ ಮಾತ್ರ ಸಿಎಂ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮನ್ನು ಈ ರೀತಿ ಸೀಮಿತಗೊಳಿಸಬೇಡಿ. ನಾನು ರಾಜ್ಯದ ಜನರ ಋಣಿಯಾಗಿದ್ದೇನೆ ಎಂದರು.
ರಾಜ್ಯ ಪ್ರವಾಸ ಮಾಡಿ ಉತ್ತರ ಕರ್ನಾಟಕದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸ ಮಾಡುತ್ತೇನೆ. ರಾಜ್ಯದ ಯುವಕರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮೂಲೆ ಮೂಲೆಗಳಲ್ಲಿ ಯುವಕರಿಗಾಗಿ ಕೈಗಾರಿಕೆ ಸೇರಿದಂತೆ ಅಗತ್ಯವಿರುವ ಉದ್ಯೋಗ ಕಲ್ಪಿಸುವ ಉದ್ದೇಶವಿದೆ ಎಂದು ಹೇಳಿದರು.

ಒಂದೂವರೆ ತಿಂಗಳ ಹಿಂದೆಯೇ ನನ್ನ ಮಗ ಟೀಸರ್‍ನ್ನು ಸಿದ್ದಪಡಿಸಿದ್ದರು. ಅವನ ಆಸೆಯಂತೆ ರಾಮನಗರದಲ್ಲೇ ಬಿಡುಗಡೆಗೊಳಿಸುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಕರಗ ಮಹೋತ್ಸವ ನಡೆಯುತ್ತಿರುವುದು ವಿಶೇಷ. ಚಾಮುಂಡೇಶ್ವರಿ ದೇವಿಯ ಆಶೀರ್ವಾದವು ನಮಗೆ ದೊರೆತಿದೆ ಎಂದರು. ಈ ಹಿಂದೆ ನಿರ್ಮಿಸಲಾಗಿದ್ದ ಜಾಗ್ವಾರ್ ಚಿತ್ರದಲ್ಲಿ ಪರಭಾಷಿಗರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ ಎಂಬ ಕೂಗು ಕೇಳಿಬಂದಿತ್ತು. ಈ ಬಾರಿ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಹಳ್ಳಿ ಸೊಗಡಿನೊಂದಿಗೆ ನೇಟಿವಿಟಿಗೆ ಆದ್ಯತೆ ನೀಡಲಾಗಿದೆ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಮುನಿರತ್ನ ನಿರ್ಮಿಸುತ್ತಿರುವ ಅದ್ಧೂರಿ ಚಿತ್ರ ಕುರುಕ್ಷೇತ್ರದಲ್ಲಿ ಅಭಿಮನ್ಯುವಾಗಿ ನಿಖಿಲ್ ಕುಮಾರ್ ಉತ್ತಮವಾಗಿ ಅಭಿನಯಿಸಿದ್ದಾನೆ. ನಾನು ಆತ ರಾಜಕೀಯಕ್ಕೆ ಬರುತ್ತಾನೆ ಎಂದುಕೊಂಡಿದ್ದೆ. ಆದರೆ ಸಿನಿಮಾ ಒಲವು ಹೆಚ್ಚಿದ್ದರಿಂದ ಅಲ್ಲೇ ಭವಿಷ್ಯ ಕಂಡುಕೊಂಡಿದ್ದಾನೆ. ರಾಮನಗರ ಜನತೆಯ ಆಶೀರ್ವಾದವೂ ಅವನಿಗಿರಲಿ ಎಂದು ಕೋರಿದರು. ಈ ವೇಳೆ ಮಾತನಾಡಿದ ನಟ ಹಾಗೂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಪ್ಪನನ್ನು ಬೆಳೆಸಿದ ರೀತಿಯಲ್ಲೇ ನನ್ನನ್ನು ಬೆಳೆಸಿ ಎಂದು ಸಭಿಕರಲ್ಲಿ ಮನವಿ ಮಾಡಿದ್ದಲ್ಲದೆ ಚಿತ್ರದಲ್ಲಿನ ವಿಶೇಷತೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಶಾಸಕ ಮುನಿರತ್ನ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇವಲ ಐದು ವರ್ಷಗಳಿಗೆ ಸಿಎಂ ಅಲ್ಲ. ಅವರೇ ಯಾವಾಗಲೂ ಸಿಎಂ ಆಗಿರಬೇಕು. ಅವರಿಂದ ಒಳ್ಳೊಳ್ಳೆ ಕೆಲಸಗಳು ಆಗಿವೆ. ನಾನು ರಾಜಕೀಯವಾಗಿ ಮಾತನಾಡುತ್ತಿಲ್ಲ. ಆದರೆ ಅವರು ಹೃದಯವಂತರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಖಿಲ್ ಕುಮಾರ್‍ಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ. ಚಿತ್ರದಲ್ಲಿ ಆತ ತೋರುವ ಆಸಕ್ತಿ, ಅಹಂ ಇಲ್ಲದೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ರೀತಿ ಎಲ್ಲವೂ ಅವನಿಗೆ ಇಲ್ಲಿ ಉತ್ತಮ ಭವಿಷ್ಯ ಇರುವುದನ್ನು ಸೂಚಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅನಿತಾಕುಮಾರಸ್ವಾಮಿ, ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಬಂಡೆಪ್ಪ ಕಾಶ್ಯಂಪೂರ್, ನಾಡಗೌಡ, ನಿರ್ಮಾಪಕ ಈ.ಕೃಷ್ಣಪ್ಪ , ಚಿತ್ರದ ನಾಯಕಿ ರಚಿತಾ ರಾಮ್, ನಿರ್ದೇಶಕ ಹರ್ಷ, ಹಾಸ್ಯ ಕಲಾವಿದ ಚಿಕ್ಕಣ್ಣ, ಸೇರಿದಂತೆ ಹಲವಾರು ಕಲಾವಿದರು, ರಾಜಕೀಯ ಮುಖಂಡರು ಭಾಗವಹಿಸಿದ್ದರು.

Facebook Comments

Sri Raghav

Admin