ಈ ವಾರ ತೆರೆಮೇಲೆ ‘ಸೀತಾರಾಮ ಕಲ್ಯಾಣ’ದ ವೈಭವ

ಈ ಸುದ್ದಿಯನ್ನು ಶೇರ್ ಮಾಡಿ

Seetarama-Kalyna--21

ಬೆಳ್ಳಿ ಪರದೆ ಮೇಲೆ ಬಹು ನಿರೀಕ್ಷಿತ ಅದ್ಧೂರಿ ವೆಚ್ಚದಲ್ಲಿ ಚೆನ್ನಾಂಬಿಕಾ ಫಿಲಂಸ್ ಮೂಲಕ ಎಚ್.ಡಿ.ಕುಮಾರಸ್ವಾಮಿ ಅರ್ಪಿಸಿ, ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಿಸಿರುವ ಸೀತಾರಾಮ ಕಲ್ಯಾಣ ಚಿತ್ರ ರಾಜ್ಯಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಅಲ್ಲದೆ ಹೈದರಾಬಾದ್, ಬಾಂಬೆ, ತಮಿಳುನಾಡಿನಲ್ಲೂ ಸಹ ಚಿತ್ರ ತೆರೆ ಕಾಣಲಿದೆ.

ಜಾಗ್ವಾರ್ ಚಿತ್ರದ ಮೂಲಕ ಭರವಸೆಯ ನಾಯಕನಾಗಿ ಮಿಂಚಿದಂತಹ ಯುವರಾಜ ನಿಖಿಲ್‍ಕುಮಾರ್ ಅಭಿನಯದ ಎರಡನೆ ಚಿತ್ರವಾದ ಸೀತಾರಾಮ ಕಲ್ಯಾಣ ಚಿತ್ರವನ್ನು ಎ.ಹರ್ಷ ನಿರ್ದೇಶನ ಮಾಡಿದ್ದು ಈ ಚಿತ್ರದ ಜವಾಬ್ದಾರಿಯನ್ನು ಸುನಿಲ್‍ಗೌಡ ನಿರ್ವಹಿಸಿದ್ದು, ಜಯಣ್ಣ ಫಿಲಂಸ್ ಮೂಲಕ ರಾಜ್ಯಾದಾದ್ಯಂತ ಚಿತ್ರಮಂದಿರಗಳಲ್ಲಿ ಕಲ್ಯಾಣದ ವೈಭೋಗವನ್ನು ನೋಡಬಹುದಾಗಿದೆ.

ಇದೊಂದು ಕುಟುಂಬ ಕಥಾನಕವಾಗಿದ್ದು, ರೈತರಿಗಾಗಿ ಎದ್ದು ನಿಲ್ಲುವ ನಾಯಕನಾಗಿ ನಿಖಿಲ್ ಅಭಿನಯಿಸುತ್ತಿದ್ದು, ಪ್ರೀತಿ, ವಾತ್ಸಲ್ಯ, ಸ್ನೇಹ ಹಾಗೂ ಕಾಮಿಡಿ ಸೇರಿದಂತೆ ನವರಸಗಳನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.

ಬರೋಬ್ಬರಿ 130ಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾ ರೆ. ಅದೇ ರೀತಿ ಸುಮಾರು 130 ದಿನಗಳ ಕಾಲ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ.
ಹಳ್ಳಿ ಸೊಗಡಿನ ಕಥಾಹಂದರದಲ್ಲಿ ಕನ್ನಡ ಹಾಗೂ ಪರಭಾಷಾ ಕಲಾವಿದರು ಸೇರಿದಂತೆ ದೊಡ್ಡ ತಾರಾಬಳಗವಿದ್ದು, ಯುವರಾಜ ನಿಖಿಲ್‍ಕುಮಾರ್‍ಗೆ ಜೋಡಿಯಾಗಿ ರಚಿತಾರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಇವರೊಂದಿಗೆ ಹಿರಿಯ ಕಲಾವಿದರಾದ ಶರತ್‍ಕುಮಾರ್, ಆದಿತ್ಯ ಮೆನನ್, ಭಾಗ್ಯಶ್ರೀ (ಮೈನೇ ಪ್ಯಾರ್ ಕಿಯಾ), ಗಿರಿಜಾ ಲೋಕೇಶ್, ಮಧುಬಾಲಾ ಸೇರಿದಂತೆ ಹಿರಿಯ ಹಾಗೂ ಕಿರಿಯ ಕಲಾವಿದರ ದಂಡೇ ಈ ಚಿತ್ರದಲ್ಲಿ ಕಾಣಸಿಗಲಿದೆ.

ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ನಿಖಿಲ್ ಕುಮಾರ್ ಮಾತನಾಡುತ್ತ, ನಾನು ನನ್ನ ತಂದೆಯಂತೆ ಡಾ.ರಾಜ್‍ಕುಮಾರ್ ಅವರ ಅಭಿಮಾನಿ. ಅವರ ಚಿತ್ರಗಳಲ್ಲಿ ಪ್ರೀತಿ, ವಾತ್ಸಲ್ಯ, ಸಮಾಜಕ್ಕೆ ಮಾದರಿಯಾಗುವಂತಹ ಕಥೆ ಇರುತ್ತಿತ್ತು, ಅದನ್ನು ಗಮನಿಸಿದ ನಾನು, ನಾವು ಮಾಡುವ ಚಿತ್ರಗಳು ಅಂಥದ್ದೇ ಸಮಾಜಕ್ಕೆ ಮಾದರಿಯಾಗುವಂತಹ ಚಿತ್ರಗಳನ್ನು ನಿರ್ಮಿಸಬೇಕೆಂಬ ಆಸೆಯಿದೆ.

ಹಾಗಾಗಿಯೇ ಈ ಸೀತಾರಾಮಕಲ್ಯಾಣ ಚಿತ್ರವೂ ಕೂಡ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ. ರೈತನೇ ಈ ದೇಶದ ಸೈಂಟಿಸ್ಟ್ ಎಂದು ನಾವೆಲ್ಲರೂ ಒಪ್ಪಲೇಬೇಕು.

ಅನ್ನ ಕೊಡುವ ರೈತನಿಂದಲೇ ನಮ್ಮ ಬದುಕು ಎಂಬುದನ್ನು ಮರೆಯಬಾರದು ಈ ಚಿತ್ರವು ಒಂದು ಯುನಿವರ್ಸಲ್ ಚಿತ್ರ ಇಡೀ ತಂಡ ಬಹಳಷ್ಟು ಶ್ರಮ ವಹಿಸಿ ಚಿತ್ರವನ್ನು ಮಾಡಿದ್ದೇವೆ, ಎಲ್ಲರೂ ನೋಡಿ ನಮ್ಮನ್ನು ಬೆಳೆಸಿ ಎಂದರು.

ನಿರ್ದೇಶಕ ಹರ್ಷ ಮಾತನಾಡುತ್ತ, ಕಳೆದ ವರ್ಷ ಜನವರಿಯಲ್ಲಿ ಈ ಚಿತ್ರವನ್ನು ಆರಂಭಿಸಿ ಈ ವರ್ಷ ಬಿಡುಗಡೆ ಮಾಡುತ್ತಿದ್ದೇವೆ, ನಿರೀಕ್ಷೆಯಂತೆ ಚಿತ್ರ ಅದ್ಧೂರಿಯಾಗಿ ಬಂದಿದ್ದು ನಿರ್ಮಾಪಕರು ಹಾಗೂ ಕಲಾವಿದರು ತುಂಬು ಸಹಕಾರ ನೀಡಿದ್ದರಿಂದ ಕುಟುಂಬ ಸಮೇತ ನೋಡುವ ಚಿತ್ರವನ್ನು ಮಾಡಿದ್ದೇನೆ.

ಇ ಲವ್ವರ್‍ಬಾಯ್, ಜವಾಬ್ದಾರಿಯುತ ಮಗನಾಗಿ ಜನರಿಗೆ ಸ್ಪಂದಿಸುವ ನಾಯಕನಾಗಿ ಕಾಮಿಡಿ ಹಾಗೂ ಆ್ಯಕ್ಷನ್ ಸನ್ನಿವೇಶಗಳಲ್ಲೂ ಕೂಡ ನಿಖಿಲ್ ಭರ್ಜರಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹ ಬೇಕೆಂದು ಕೇಳಿಕೊಂಡರು.

ನಾಯಕಿ ರಚಿತಾರಾಮ್ ಮಾತನಾಡಿ, ಇದೊಂದು ಸಂಪೂರ್ಣ ಫ್ಯಾಮಿಲಿ ಸಬ್ಜೆಕ್ಟ್ ಆಗಿದ್ದು ಎಲ್ಲ ಎಲಿಮೆಂಟ್ಸ್ ಕಾಣಿಸಲಿದೆ, ಈ ಹಿಂದೆ ನನಗೆ ನೀಡಿದಂತಹ ಪ್ರೋತ್ಸಾಹವನ್ನು ಈ ಚಿತ್ರಕ್ಕೂ ನೀಡಿ ನಮ್ಮ ತಂಡವನ್ನು ಗೆಲ್ಲಿಸಬೇಕೆಂದು ಕೇಳಿಕೊಂಡರು.

ಕಾರ್ಯಕ್ರಮಕ್ಕೆ ಆಗಮಿಸಿದ್ದಂತಹ ನಿರ್ಮಾಪಕ ಮುನಿರತ್ನ ಮಾತನಾಡುತ್ತಾ, ನಿಖಿಲ್‍ರ ಸಮಯಪ್ರಜ್ಞೆ ಹಾಗೂ ಕೆಲಸದಲ್ಲಿರುವ ನಿಷ್ಠೆಯನ್ನು ಕೊಂಡಾಡಿ ಈ ಚಿತ್ರವನ್ನು ಗೆಲ್ಲಿಸಿ ಎಂದು ಕೇಳಿದರು. ಈ ಚಿತ್ರಕ್ಕೆ ಸ್ವಾಮಿ .ಜೆ ಛಾಯಾಗ್ರಹಣ ಮಾಡಿದ್ದು, ಅನೂಪ್ ರುಬೆನ್ಸ್ ಸಂಗೀತವನ್ನು ನೀಡಿದ್ದಾರೆ. ರಾಮ್-ಲಕ್ಷ್ಮಣ್‍ರ ಸಾಹಸವಿರುವ ಈ ಚಿತ್ರ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.

Sitharam

Facebook Comments