ಸಿಎಂ ಪುತ್ರನ ಡೈಲಾಗ್ಸ್’ಗೆ ಸಿನಿಪ್ರಿಯರು ಫಿದಾ..!

ಈ ಸುದ್ದಿಯನ್ನು ಶೇರ್ ಮಾಡಿ

Seetarama-Kalyana--mOive

ಬೆಂಗಳೂರು,ಜ.25- ಭೂಮಿ ಪ್ರೀತ್ಸೋದನ್ನ ತಾತನಿಂದ ಕಲಿತೆ; ಜನರನ್ನು ಪ್ರೀತ್ಸೋದನ್ನು ತಂದೆಯಿಂದ ಕಲಿತೆ; ಬದಕು ಹೇಗೆ ರೂಪಿಸಿಕೊಳ್ಳಬೇಕೋ ಅನ್ನೋದನ್ನು ನಿಮ್ಮಿಂದ ಕಲಿತಿದ್ದೀನಿ.. ಇಂತಹದ್ದೊಂದು ಡೈಲಾಗ್‍ಗೆ ಚಿತ್ರ ಮಂದಿರದ ತುಂಬೆಲ್ಲಾ ಶಿಳ್ಳೆಯೋ ಶಿಳ್ಳೆ..

ಇದು ಜಾಗ್ವಾರ್ ಹುಡಗ ನಿಖಿಲ್ ಕುಮಾರಸ್ವಾಮಿಯ ಎರಡನೇ ಸಿನಿಮಾ ಸೀತಾರಾಮ ಕಲ್ಯಾಣದ ಡೈಲಾಗು.. ಇಂತಹ ಅದೆಷ್ಟೋ ಡೈಲಾಗುಗಳು ಚಿತ್ರದುದ್ದಕ್ಕೂ ಚಪ್ಪಾಳೆ, ಶಿಳ್ಳೆಗಳನ್ನು ಗಿಟ್ಟಿಸಿಕೊಂಡಿವೆ.

ಈಗಾಗಲೇ ನಾಡಿನಾದ್ಯಂತ ಬಿಡುಗಡೆಗೊಂಡು ಪ್ರತಿಯೊಂದು ಚಿತ್ರಮಂದಿಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸೀತಾರಾಮ ಕಲ್ಯಾಣ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ರೈತರ ಪರ ನಿಲ್ಲುವ ನಾಯಕನ ಪಾತ್ರದಲ್ಲಿ ನಿಖಿಲ್ ಮಿಂಚಿದ್ದಾರೆ. ನಾಡಿನ ಸೊಗಡು ಚಿತ್ರದಲ್ಲಿ ಅದ್ಧೂರಿಯಾಗಿಯೇ ಚಿತ್ರಿತಗೊಂಡಿದೆ. ಚಿತ್ರದಲ್ಲ ಭರಪೂರ ಡೈಲಾಗ್‍ಗಳಿದ್ದು, ಅಭಿಮಾನಿಗಳಿಗೆ ಕಿಕ್ ನೀಡುತ್ತಿದೆ.

ಚಿತ್ರದಲ್ಲಿ ರೈತರ ಆತ್ಮಹತ್ಯೆಯ ಸಮಸ್ಯೆಗಳನ್ನು ಅನಾವರಣಗೊಳಿಸಲಾಗಿದ್ದು, ನಾಯಕ ರೈತರ ಪರ ನಿಂತು ಯಾವ ರೀತಿ ನ್ಯಾಯ ಒದಗಿಸುತ್ತಾನೆ ಎಂಬುದು ಚಿತ್ರದ ತಿರುಳು..

ಚಿತ್ರದಲ್ಲಿ ಮಿಳಿತವಾಗಿರುವ ತಿಳಿ ಹಾಸ್ಯ ಕಚಗುಳಿ ಇಡುತ್ತದೆ. ಹಾಡುಗಳು ಮೈ ನವಿರೇಳಿಸದೆ ಇರದು. ಚಿತ್ರ ನೋಡಿ ಬಂದ ಮೇಲೂ ಕೆಲವು ಹಾಡುಗಳು ನಾಲಿಗೆಯ ಮೇಲೆ ಗುನುಗುನಿಸುತ್ತಲೇ ಇರುತ್ತದೆ.

ನವಿರಾದ ಪ್ರೀತಿ ಕಥೆಯ ಓಘಕ್ಕೆ ಒತ್ತಾಸೆಯಾಗಿ ನಿಂತಿದೆ. ಸಾಹಸ ಪಾತ್ರಗಳಲ್ಲಿ ನಿಖಿಲ್‍ಗೆ ಫುಲ್ ಮಾಕ್ರ್ಸ್.. ಎರಡನೇ ಚಿತ್ರದಲ್ಲಿ ನಿಖಿಲ್ ಸಖತ್ ಸಿಕ್ಸರ್ ಬಾರಿಸಿದ್ದಾರೆ. ನಿಖಿಲ್ ಅಭಿನಯದಲ್ಲೂ ಸೈ ಎನಿಸಿಕೊಂಡಿದ್ದಾರೆ.

Seetarama-Kalyana--mOive-01

ನಾಯಕಿ ರಚಿತಾರಾಮ್ ಮುಗ್ಧ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದಾರೆ. ಶರತ್ ಕುಮಾರ್, ಚಿಕ್ಕಣ್ಣ, ಕಾಮಿಡಿ ಕಿಲಾಡಿಗಳ ಬಳಗ, ಬಾಲಿವುಡ್ ನಟಿ ಮಧುಬಾಲ ಹೀಗೆ ದೊಡ್ಡ ತಾರಾಬಳಗವನ್ನೇ ಹೊಂದಿರುವ ಸೀತಾರಾಮ ಕಲ್ಯಾಣ ಚಿತ್ರವನ್ನು ಕುಟುಂಬ ಸಮೇತ ನೋಡಬಹುದಾಗಿದೆ.

ನಿರ್ದೇಶಕ ಎ.ಹರ್ಷಾ, ಒಂದು ಉತ್ತಮ ಸಂದೇಶವುಳ್ಳ ಸದಭಿರುಚಿಯ ಕೌಟುಂಬಿಕ ಚಿತ್ರವನ್ನು ನೀಡಿದ್ದು, ರಾಜ್ಯದೆಲ್ಲೆಡೆ ಭರ್ಜರಿ ರೆಸ್ಪಾನ್ಸ್ ಜೊತೆಗೆ, ಮೆಚ್ಚುಗೆಯ ಸುರಿಮಳೆಯೇ ಆಗುತ್ತಿದೆ.

ನಿನ್ನೆ ನಗರದ ಒರಾಯನ್ ಮಾಲ್‍ನಲ್ಲಿ ಆಯೋಜಿಸಲಾಗಿದ್ದ ಚಿತ್ರದ ಪ್ರೀಮಿಯರ್ ಶೋಗೆ ರಾಜಕೀಯ ನಾಯಕರ ದಂಡೇ ಹರಿದು ಬಂದಿತ್ತು. ಡಿಸಿಎಂ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಂಡೆಪ್ಪ ಕಾಶಂಪೂರ್, ಈಶ್ವರಪ್ಪ ಸೇರಿದಂತೆ ಎಲ್ಲಾ ಪಕ್ಷದ ನಾಯಕರೂ ಚಿತ್ರ ವೀಕ್ಷಿಸಿದರು.

ಸೀತಾರಾಮ ಕಲ್ಯಾಣದಲ್ಲಿ ಒಳ್ಳೆಯ ಸಂದೇಶವಿದೆ. ಕೌಟುಂಬಿಕ ಸಂಬಂಧಗಳನ್ನು ಉತ್ತಮವಾಗಿ ತೋರಿಸಲಾಗಿದೆ ಎಂದು ಎಲ್ಲರೂ ಗುಣಗಾನ ಮಾಡಿದರು.
ಎರಡನೇ ಚಿತ್ರದಲ್ಲೇ ನಿಖಿಲ್ ಉತ್ತಮ ಅಭಿನಯ ನೀಡಿದ್ದು ಮುಂದಿನ ದಿನಗಳಲ್ಲಿ ನಿಖಿಲ್‍ಗೆ ಉತ್ತಮ ಭವಿಷ್ಯವಿದೆ ಎಂದು ಶುಭ ನುಡಿದು ಆಶೀರ್ವದಿಸಿದರು.
ಒಟ್ಟಾರೆ ಸೀತಾರಾಮ ಕಲ್ಯಾಣಕ್ಕೆ ರಾಜ್ಯದ ಜನರು ಅಕ್ಷತೆ ಹಾಕಿ ಶುಭ ಹಾರೈಸಿದ್ದು, ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.

Facebook Comments

Sri Raghav

Admin