ಸೆಲ್ಫೀ ಗೀಳು : ಮಹಾರಾಷ್ಟ್ರದಲ್ಲಿ ನೀರುಪಾಲಾದ ಐವರು ಯುವಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಪಾಲ್‍ಗಢ (ಮಹಾರಾಷ್ಟ್ರ), ಜು.3-ಮೊಬೈಲ್ ಫೋನ್ ಸೆಲ್ಫೀ ಗೀಳಿಗೆ ಯುವ ಜನಾಂಗ ಬಲಿಯಾಗುತ್ತಿರುವ ಪ್ರಕರಣ ಮರುಕಳಿಸಿದ್ದು, ಮಹಾರಾಷ್ಟ್ರದಲ್ಲಿ ಐವರು ನೀರುಪಾಲಾಗಿದ್ದಾರೆ.

ಪಾಲ್‍ಗಢ ಜಿಲ್ಲೆಯ ಜವಹರ್ ಪಟ್ಟಣದ ಬಳಿ ಇರುವ ಕಾಳಮಾಂಡವೀ ಜಲಪಾತದಲ್ಲಿ ನಿನ್ನೆ ಅಪರಾಹ್ನ ಈ ಘಟನೆ ಸಂಭವಿಸಿದೆ. ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಜವಾಹರ್ ಪಟ್ಟಣದ ಹೊರವಲಯದಲ್ಲಿರುವ ಜಲಪಾತ ವೀಕ್ಷಣೆಗಾಗಿ 13 ಯುವಕರ ಗುಂಪೊಂದು ತೆರಳಿತ್ತು. ಈ ಸಂದರ್ಭದಲ್ಲಿ ಇಬ್ಬರು ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಕಾಲು ಜರಿ ಜಲಪಾತದ ನೀರಿನೊಳಗೆ ಬಿದ್ದರು.

ಇವರನ್ನು ರಕ್ಷಿಸಲು ನೀರಿಗೆ ಹಾರಿದ ಇನ್ನೂ ಮೂವರು ಸಹ ಜಲ ಸಮಾಧಿಯಾದರು ಎಂದು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ಮುಖ್ಯಸ್ಥ ವಿವೇಕಾನಂದ ಕದಂ ತಿಳಿಸಿದ್ದಾರೆ.

ನಿನ್ನೆ ಸಂಜೆ ಎಲ್ಲ ಶವಗಳನ್ನು ನೀರಿನಿಂದ ಹೊರಕ್ಕೆ ತೆಗೆಯಲಾಗಿದೆ. ಮೃತರನ್ನು ದೇವೇಂದ್ರ ವಾಘ್, ಪ್ರಥಮೇಶ್ ಚೌಹಾಣ್, ದೇವೇಂದ್ರ ಫಲ್ಡಾನ್‍ಕರ್, ನಿಮೇಶ್ ಪಾಟೀಲ್ ಮತ್ತು ರಿಂಕು ಬೋಯರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ 19 ರಿಂದ 28 ವರ್ಷಗಳ ವಯೋಮಾನದವರು.

Facebook Comments