ಲಾಕ್‍ಲ್ಯಾಂಡ್ ಭೂಮಿ ಮಾರಾಟ ಮಾಡಲು ಮುಂದಾದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.24- ಸರ್ಕಾರಿ ರಸ್ತೆ ಇಲ್ಲದೆ ಮಧ್ಯಭಾಗ ದಲ್ಲಿ ಸಿಲುಕಿರುವ ಲಾಕ್‍ಲ್ಯಾಂಡ್ ಭೂಮಿಯನ್ನು ಅಕ್ಕಪಕ್ಕದ ಜಮೀನಿನ ಮಾಲೀಕರಿಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಪರಿಷತ್‍ನ ಪ್ರಶ್ನೋತ್ತರದ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿರುವ ಬಿ-ಖರಾಬು ಭೂಮಿಗಳು ಹಾಗು ಬೆಂಗಳೂರಿನಲ್ಲಿ ಭೂ ಕಬಳಿಕೆ ಆಗಿರುವ ಜಮೀನುಗಳ ಕುರಿತು ವಿವರಣೆ ನೀಡಿದರು. ಸದಸ್ಯರು ಉಪಪ್ರಶ್ನೆ ಕೇಳಿ ಬಿ-ಖರಾಬು ಭೂಮಿ ದುರುಪಯೋಗ ಆಗುತ್ತಿರುವ ಬಗ್ಗೆ ಸರ್ಕಾರದ ಗಮನ ಸೆಳೆದರು.

ಆಗ ಉತ್ತರ ನೀಡಿದ ಸಚಿವರು ಒತ್ತುವರಿಯಿಂದ ತೆರವಾದ ಭೂಮಿಯ ಪೈಕಿ 5160 ಎಕರೆಯನ್ನು ಸರ್ಕಾರದ ಉದ್ದೇಶಕ್ಕೆ ಬಳಕೆ ನೀಡಲಾಗಿದೆ. ಕೆಲವೆಡೆ ಸುತ್ತಲೂ ಖಾಸಗಿ ಜಮೀನುಗಳಿರುತ್ತವೆ. ಮಧ್ಯ ಭಾಗದಲ್ಲಿ ಒಂದೆರಡು ಗುಂಟೆಯಷ್ಟು ಸರ್ಕಾರಿ ಭೂಮಿ ಇರುತ್ತದೆ ಅಲ್ಲಿಗೆ ಹೋಗಲು ಸರ್ಕಾರಿ ರಸ್ತೆ ಇರುವುದಿಲ್ಲ. ಅಂತಹ ಲಾಕ್‍ಲ್ಯಾಂಡ್ ಭೂಮಿಯನ್ನು ಅಕ್ಕಪಕ್ಕದ ಜಮೀನುಗಳ ಮಾಲೀಕರಿಗೆ ಮಾರಾಟ ಮಾಡಿ ಎಂದು ಹಲವಾರು ಶಾಸಕರು ಸಲಹೆ ನೀಡಿದ್ದಾರೆ. ಅದರಂತೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಒಂದು ವೇಳೆ ಈ ರೀತಿ ಲಾಕ್‍ಲ್ಯಾಂಡ್ ಅಕ್ರಮ ಒತ್ತುವರಿಯಾಗಿದ್ದರೂ ಕೂಡ ಅಕ್ಕಪಕ್ಕದವರಿಗೆ ಮಾರಾಟ ಮಾಡಲಾಗುವುದು. ಉಳಿದಂತೆ ಕೆರೆ, ಕಟ್ಟೆ ಹಾಗೂ ಇತರ ಒತ್ತುವರಿಗಳನ್ನು ಬಿಟ್ಟುಕೊಡುವುದಿಲ್ಲ. ಸರ್ಕಾರ ಅದನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲಿದೆ. ಒತ್ತುವರಿಯಿಂದ ತೆರವು ಮಾಡಿ ಬಂದ 15 ದಿನಕ್ಕೆ ಮತ್ತೆ ಒತ್ತುವರಿಯಾಗುತ್ತಿದೆ. ಅದನ್ನು ತಪ್ಪಿಸಲು ಶಾಶ್ವತವಾದ ಸರಪಳಿ ಬೇಲಿ ನಿರ್ಮಿಸಲು 100 ಕೋಟಿ ರೂಪಾಯಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡಿದ್ದೇವೆ ಎಂದು ಸಚಿವರು ಹೇಳಿದರು.

Facebook Comments