ಬ್ರೇಕಿಂಗ್ : ಹಿರಿಯ ನಟ ಶಿವರಾಂ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ಸ್ಯಾಂಡಲ್‍ವುಡ್‍ನ ಹಿರಿಯ ನಟರಾದ ಶಿವರಾಂ(84) ಅವರು ಇಂದು ಮಧ್ಯಾಹ್ನ ನಿಧನರಾದರು. ಚಂದನವನದ ಶಿಸ್ತಿನ ಸಿಪಾಯಿ ಎಂದೇ ಹೆಸರಾಗಿದ್ದ ಶಿವರಾಂ ಅವರು ಕಳೆದ ಮೂರು ದಿನಗಳಿಂದ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಹಾಸ್ಯನಟರಾಗಿ ಹೆಸರು ಮಾಡಿದ್ದ ಶಿವರಾಂ ಅವರು ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿದ ಕಲಾವಿದರು. ಇವರ ಸಹೋದರ ರಾಮನಾಥ್ ಅವರ ಜೊತೆ ಸೇರಿ ರಾಶಿ ಬ್ರದರ್ಸ್ ಎಂಬ ಸಂಸ್ಥೆ ಹುಟ್ಟುಹಾಕಿ ವರನಟ ಡಾ.ರಾಜ್‍ಕುಮಾರ್ ಅಭಿನಯದ ನಾನೊಬ್ಬ ಕಳ್ಳ ಚಿತ್ರವೂ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದರು.

ಇವರದೇ ಸಂಸ್ಥೆಯ ಡ್ರೈವರ್ ಹನುಮಂತು ಚಲನಚಿತ್ರದಲ್ಲಿ ಶಿವರಾಂ ಅವರೇ ನಾಯಕ ನಟರಾಗಿ ಅಭಿನಯಿಸಿದ್ದರು. ಶರಪಂಜರ ಚಿತ್ರದಲ್ಲಿ ಇವರು ನೀಡಿದ ಅಮೋಘ ಅಭಿನಯವು ಇವರಿಗೆ ಶರಪಂಜರ ಶಿವರಾಂ ಎಂಬ ಹೆಸರನ್ನೇ ತಂದುಕೊಟ್ಟಿತ್ತು.

ಹೃದಯ ಸಂಗಮ ಚಿತ್ರದ ಮೂಲಕ ಚಿತ್ರ ಪಯಣ ಆರಂಭಿಸಿದ ಶಿವರಾಂ ಅವರು ಅಭಿನಯವಷ್ಟೇ ಅಲ್ಲದೆ ತಮ್ಮ ಸಜ್ಜನಿಕೆ, ಸರಳತೆ, ಸದ್ಗುಣಗಳಿಗೂ ಹೆಸರಾಗಿದ್ದರು. ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದ ಶಿವರಾಂ ಡಾ.ರಾಜ್ ಕುಟುಂಬವೂ ಸೇರಿದಂತೆ ಹಲವಾರು ಅಯ್ಯಪ್ಪ ಭಕ್ತರಿಗೆ ಗುರುಸ್ವಾಮಿಯಾಗಿ ಶಬರಿಮಲೆ ಯಾತ್ರೆ ಮುಂದಾಳತ್ವ ವಹಿಸುತ್ತಿದ್ದರು.

ಕಷ್ಟದಲ್ಲಿದ್ದವರಿಗೆ ನೆರವಾಗುವ, ಇತರರ ಕಷ್ಟವನ್ನು ತಮ್ಮದೆಂದೇ ಭಾವಿಸುವ ಹೃದಯ ಶ್ರೀಮಂತಿಕೆ ಉಳ್ಳವರಾಗಿದ್ದರು. ಇತ್ತೀಚೆಗೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಶಿವರಾಂ ತೀವ್ರ ಆಘಾತಕ್ಕೊಳಗಾಗಿದ್ದರು.

ಕೊನೆಗೂ ಅಯ್ಯಪ್ಪ ಸ್ವಾಮಿಯ ಯಾತ್ರೆಯ ಸಿದ್ದತೆಯಲ್ಲಿರುವಾಗ ಕುಸಿದುಬಿದ್ದು ಗಾಯಗೊಂಡು ಇಹಲೋಕ ತ್ಯಜಿಸಿದ್ದಾರೆ. ಆರು ದಶಕಗಳ ಕಾಲ ನೂರಾರು ಚಿತ್ರಗಳಲ್ಲಿ ಅಭಿನಯಿಸಿರುವ ಶಿವರಾಂ ಅವರು ಇಂದು ಭೌತಿಕವಾಗಿ ಇರದಿದ್ದರೂ ತಮ್ಮ ಚಲನಚಿತ್ರಗಳ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿರುತ್ತಾರೆ.

 #  ಸಿಎಂ ಸಂತಾಪ

ಹಿರಿಯ ಕಲಾವಿದ ಶಿವರಾಂ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಕನ್ನಡ ಚಿತ್ರರಂಗಕ್ಕೆ ಶಿವರಾಂ ಅವರ ಕೊಡುಗೆ ಅನನ್ಯ. ಆರು ದಶಕಗಳ ಸುದೀರ್ಘ ವೃತ್ತಿ ಜೀವನದಲ್ಲಿ ಸಹಾಯಕ ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿ ಕಾರ್ಯನಿರ್ವಹಿಸಿದ್ದಾರೆ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶರಪಂಜರ, ಶುಭ ಮಂಗಳ, ನಾಗರಹಾವು ಸೇರಿದಂತೆ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರ ನಿಧನದ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಬ್ಬ ಮೇರುನಟನನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ.

ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಪಾರ ಅಭಿಮಾನಿಗಳು ಹಾಗೂ ಕುಟುಂಬವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin