ರಾಜ್ಯದಲ್ಲಿ ಹಿರಿಯ ನಾಗರಿಕರ ಓಡಾಟಕ್ಕೆ ಬ್ರೇಕ್ ಹಾಕುವ ಕಾನೂನು ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.6- ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಓಡಾಟಕ್ಕೆ ಕಡಿವಾಣ ಹಾಕುವ ಕಾನೂನು ಜಾರಿಗೆ ತರುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 23 ಸಾವಿರ ಗಡಿ ದಾಟಿದೆ. ಅದರಲ್ಲೂ ಬೆಂಗಳೂರಲ್ಲಿ ಪ್ರತಿದಿನ ಸಾವಿರಕ್ಕೂ ಅಧಿಕ ಪ್ರಕರಣಗಳು ಬರುತ್ತಿವೆ.

ಸೋಂಕು ನಿಯಂತ್ರಣಕ್ಕೆ ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ. ರಾಜ್ಯದಲ್ಲಿ ಹಿರಿಯ ನಾಗರೀಕರನ್ನು ಮನೆಯಿಂದ ಹೊರಬರದಂತೆ ತಡೆಯಲು ಹೊಸ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.

ಕೊರೊನಾ ವೈರಸ್ 60 ವರ್ಷ ಮೇಲ್ಪಟ್ಟವರಿಗೆ ಹೆಚ್ಚು ಅಪಾಯಕಾರಿಯಾದ್ದರಿಂದ ಹಿರಿಯ ನಾಗರಿಕರನ್ನು ಲಾಕ್‍ಡೌನ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ಒಂದಷ್ಟು ತಿಂಗಳು ಹಿರಿಯ ನಾಗರಿಕರನ್ನು ಹೋಂ ಐಸೋಲೇಶನ್ ಮಾಡಲು ಸರ್ಕಾರ ನಿರ್ಧರಿಸಿದೆ.

ಸೋಂಕು ನಿವಾರಣೆ ಆಗುವವರೆಗೂ 60 ವರ್ಷ ಮೇಲ್ಪಟ್ಟವರು ಮನೆಯಲ್ಲೇ ಇದ್ದರೆ ಸೋಂಕು ಹರಡುವಿಕೆ ಕ್ರಮೇಣ ಕಡಿಮೆಯಾಗಬಹುದೇನೋ ಎಂದು ಸರ್ಕಾರ ಲೆಕ್ಕಾಚಾರ ಹಾಕುತ್ತಿದೆ. ಈ ಬಗ್ಗೆ ಶೀಘ್ರವಾಗಿ ಅಧಿಕೃತವಾದ ಕಾನೂನು ರೂಪುಗೊಳ್ಳುವ ಸಾಧ್ಯತೆ ಇದೆ.

ಬೇರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 60 ವಯಸ್ಸಿಗಿಂತ ಮೇಲ್ಪಟ್ಟವರು, ಜ್ವರ ಲಕ್ಷಣಗಳಿರುವ ಹಿರಿಯ ನಾಗರೀಕರನ್ನು ತಪಾಸಣೆಗೊಳಪಡಿಸುವಂತೆ ಕಾರ್ಯಪಡೆಗಳಿಗೆ ಸೂಚನೆ ನೀಡಲಾಗಿದೆ.

ಹಿರಿಯ ನಾಗರೀಕರನ್ನು ಮನೆಗಳಿಂದ ಹೊರ ಬಿಡಬಾರದು ಎಂಬ ಕಾನೂನು ಜಾರಿಗೂ ಚಿಂತನೆ ನಡೆಸಲಾಗುತ್ತಿದೆ. ತಜ್ಞರು ಮತ್ತು ಪ್ರಮುಖರ ಜತೆ ಈ ಕುರಿತು ಚರ್ಚಿಸಲಾಗುತ್ತಿದೆ.

ಹೀಗೆ ಹಲವು ನಿಯಮಗಳನ್ನೂ ರೂಪಿಸಿ ಕೊರೊನಾದಿಂದ ಹಿರಿಯ ನಾಗರಿಕರನ್ನ ಪಾರು ಮಾಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಕಾನೂನು ಜಾರಿಗೆ ಈಗಾಗಲೇ ತೀರ್ಮಾನ ಮಾಡಲಾಗಿದೆ.

ಅಂತಿಮವಾಗಿ ಸೂಕ್ತ ತಜ್ಞರೊಂದಿಗೆ ಚರ್ಚಿಸಿ ಅಂತಿಮ ಕರಡು ಸಿದ್ದಪಡಿಸಿ ಕಾನೂನು ರೂಪಿಸಲಾಗುತ್ತೆ. ಶೀಘ್ರವಾಗಿ ಹೊಸ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ.

# ಸರ್ಕಾರ ಹೇರಬಹುದಾದ ನಿರ್ಬಂಧಗಳೇನು? :
60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರ ಬರುವಂತಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಕ್ವಾರಂಟೈನ್, ಪಾಕ್ರ್ಗಳಿಗೆ ಅಥವಾ ವಾಕಿಂಗ್ ಮಾಡಲು ಹೊರಗೆ ಬರುವಂತಿಲ್ಲ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೋಂ ಐಸೋಲೇಷನ್, ಮನೆಯಿಂದ ಹೊರ ಬರುವ ಎಲ್ಲಾ ಅವಕಾಶಗಳನ್ನು ನಿರ್ಬಂಧಿಸುವುದು.

Facebook Comments