ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.28- ವಿಧಾನಪರಿಷತ್‍ನ ಉಪಸಭಾಪತಿಯಾಗಿದ್ದ ಎಸ್.ಎಲ್.ಧರ್ಮೇಗೌಡ, ವಿಧಾನಸಭೆ ಸದಸ್ಯ ಮಲ್ಲಪ್ಪ ಚನ್ನವೀರಪ್ಪ ಮನಗೂಳಿ, ರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿದ್ದ ಶ್ರೀ ಹರ್ಷಾನಂದ ಸ್ವಾಮೀಜಿ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಭಾವಪೂರ್ಣ ಸಂತಾಪ ಸಲ್ಲಿಸಲಾಯಿತು. ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ವಜುಬಾಯಿ ವಾಲಾ ಅವರನ್ನು ಬೀಳ್ಕೊಟ್ಟ ನಂತರ ವಂದೇ ಮಾತರಂ ಗೀತೆಯೊಂದಿಗೆ ವಿಧಾನಸಭೆ ಕಲಾಪ ಆರಂಭವಾಯಿತು.

ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರು ಸಂತಾಪ ಸೂಚನೆ ಕೈಗೆತ್ತಿಕೊಂಡು ಇತ್ತೀಚಿಗೆ ಅಗಲಿದ ವಿಧಾನಸಭೆ ಮಾಜಿ ಸದಸ್ಯರಾದ ರೇಣುಕಾರಾಜೇಂದ್ರನ್, ಪ್ರೇಮಾನಂದ ಜೈವಂತ ಸುಬ್ರಾಯ, ಬಸಂತರೆಡ್ಡಿ ಪಾಟೀಲ ಮೋತಕಪಲ್ಲಿ, ಕೇಂದ್ರದ ಮಾಜಿ ಸಚಿವರಾಗಿದ್ದ ಬೂಟಾಸಿಂಗ್, ಉದ್ಯಮ ಸಮೂಹಗಳ ಸ್ಥಾಪಕರಾಗಿದ್ದ ಡಾ.ಆರ್.ಎನ್.ಶೆಟ್ಟಿ, ಹಿರಿಯ ತತ್ವಶಾಸ್ತ್ರ ವಿದ್ವಾಂಸರಾಗಿದ್ದ ಡಾ.ಬನ್ನಂಜೆ ಗೋವಿಂದಾಚಾರ್ಯ, ಖ್ಯಾತ ವಿಜ್ಞಾನಿ ಡಾ.ರೊತ್ತಮ್ ನರಸಿಂಹ ನಿಧನ ಹೊಂದಿರುವುದನ್ನು ಅತ್ಯಂತ ವಿಷಾದದಿಂದ ತಿಳಿಸಿದರು.

ವಿಧಾನಪರಿಷತ್‍ನ ಉಪಸಭಾಪತಿ ಯಾಗಿದ್ದ ಎಸ್.ಎಲ್.ಧರ್ಮೇಗೌಡ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣದ ಸರಪನಹಳ್ಳಿ ಗ್ರಾಮದಲ್ಲಿ ಜನಿಸಿ ಬಿಎ ಪದವೀಧರರಾಗಿದ್ದರು, ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿ ಸಹಕಾರಿ ಸೇವಾ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು. 2004ರಲ್ಲಿ 12ನೇ ವಿಧಾನಸಭೆಗೆ ಬೀರೂರು ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2018ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಗೊಂಡು ಉಪಸಭಾಪತಿ ಪೀಠ ಅಲಂಕರಿಸಿದರು. ಸರಳ, ಸಜ್ಜನ, ಸಹಕಾರಿ ಧುರೀಣ ಧರ್ಮೇಗೌಡರು ಡಿ.28ರಂದು ನಿಧನಹೊಂದಿದ್ದಾರೆ ಎಂದು ತಿಳಿಸಿದರು.

ಹಾಲಿ ಶಾಸಕ ಮನಗೂಳಿ ಅವರು ಸಿಂಧಗಿಯಲ್ಲಿ ಜನಿಸಿದ್ದು, ವೃತ್ತಿಯಲ್ಲಿ ಕೃಷಿಕರಾಗಿದ್ದರು. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಗ್ರಾಮಸೇವಕರಾಗಿ ಸಲ್ಲಿಸಿದ್ದ ಸೇವೆಗೆ ರಾಜ್ಯಪ್ರಶಸ್ತಿ ಪಡೆದುಕೊಂಡಿದ್ದಾರೆ. 1994ರಲ್ಲಿ ಮೊದಲ ಬಾರಿಗೆ ಸಿಂಧಗಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2018ರಲ್ಲಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದರು. 1998-99ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವರಾಗಿ, 2018-19ರಲ್ಲಿ ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇಂದು ಮುಂಜಾನೆ ಅವರು ನಿಧನಹೊಂದಿದ್ದಾರೆ ಎಂದು ವಿಷಾದಿಸಿದರು.

ಮಾಜಿ ಸಚಿವರಾಗಿದ್ದ ರೇಣುಕಾ ರಾಜೇಂದ್ರನ್ ಅವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಐದನೇ ವಿಧಾನಸಭೆಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ 6 ಹಾಗೂ 9ನೇ ವಿಧಾನಸಭೆಗೆ ಚುನಾಯಿತರಾಗಿದ್ದರು. ಯುವ ಜನ ಸೇವೆ, ರೇಷ್ಮೆ, ಸಣ್ಣ ಕೈಗಾರಿಕೆಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಮಹಿಳೆಯರು ಮತ್ತು ಮಕ್ಕಳ ಏಳಿಗೆಗಾಗಿ ಶ್ರಮಿಸಿದ ಅವರು ಡಿ.15ರಂದು ನಿಧನ ಹೊಂದಿದ್ದಾರೆ ಎಂದರು.

ಮಾಜಿ ಸಚಿವರಾಗಿದ್ದ ಪ್ರೇಮಾನಂತ ಜೈವಂತ ಸುಬ್ರಾಯ ಅವರು, ಶಿರಸಿ ವಿಧಾನಸಭಾ ಕ್ಷೇತ್ರದಿಂದ 1994ರಲ್ಲಿ ಆಯ್ಕೆಯಾಗಿ ಅಬಕಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು ಎಂದರು. ವಿಧಾನಸಭೆಯ ಮಾಜಿ ಸದಸ್ಯ ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ ಅವರು ಸೇಡಂ ವಿಧಾನಸಭಾ ಕ್ಷೇತ್ರದಿಂದ 9ಮತ್ತು 11ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು. ಜ.4ರಂದು ಅವರು ನಿಧನ ಹೊಂದಿದ್ದಾರೆ ಎಂದು ವಿಷಾದಿಸಿದರು.

ಕೇಂದ್ರದ ಮಾಜಿ ಸಚಿವರಾಗಿದ್ದ ಬೂಟಾಸಿಂಗ್ ಅವರು 8 ಬಾರಿ ಸಂಸದರಾಗಿ ಕೇಂದ್ರ ಸರ್ಕಾರದಲ್ಲಿ ಗೃಹ, ಸಂಸದೀಯ ವ್ಯವಹಾರ, ರೈಲ್ವೆ, ಕೃಷಿ ಸೇರಿದಂತೆ ಹಲವು ಪ್ರಮುಖ ಖಾತೆಗಳ ಸಚಿವರಾಗಿದ್ದರು, ಬಿಹಾರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಬಡವರ ದೀನ ದಲಿತರ ಗಟ್ಟಿ ದನಿಯಾಗಿದ್ದರು ಎಂದು ಸ್ಮರಿಸಿದರು.

ಆರ್‍ಎನ್‍ಎಸ್ ಶಿಕ್ಷಣ ಹಾಗೂ ಉದ್ಯಮ ಸಮೂಹಗಳ ಸ್ಥಾಪಕರಾಗಿದ್ದ ಡಾ.ಆರ್.ಎನ್.ಶೆಟ್ಟಿ ಅವರ ಅಸಾಧಾರಣ ಸೇವೆಗೆ ಸರ್ ಎಸ್.ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೈಗಾರಿಕಾ ರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ನಾಡಿನ ಶ್ರೇಷ್ಠ ಉದ್ಯಮಿ ಸಮಾಜಮುಖಿ ಚಿಂತಕರನ್ನು ಕಳೆದುಕೊಂಡಂತಾಗಿದೆ ಎಂದರು.

ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಚಾರ್ಯ ಅವರು ಸಂಸ್ಕøತ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದು, ವೇದ, ಉಪನಿಸತ್ತು, ಪುರಾಣ, ರಾಮಾಯಣ, ಮಹಾಭಾರತ ಕುರಿತು ದೇಶ-ವಿದೇಶಗಳಲ್ಲಿ 26 ಸಾವಿರ ಗಂಟೆಗಳಿಗೂ ಹೆಚ್ಚು ಉಪನ್ಯಾಸ ನೀಡಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ, ಪದ್ಮಶ್ರೀ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು ಎಂದು ಗುಣಗಾನ ಮಾಡಿದರು.

ಸಾರಸ್ವತ ಸಂತ ಸ್ವಾಮಿ ಶ್ರೀ ಹರ್ಷಾನಂದ ಅವರು ಸನಾತನ ಧರ್ಮದ ವಿಷಯದಲ್ಲಿ ಪರಿಣಿತಿ ಹೊಂದಿದ್ದರು. ಎನ್‍ಸೈಕ್ಲೋಪಿಡಿಯ ಆಫ್ ಹಿಂದುಯಿಸಂ ಅವರ ಕೃತಿ ವಿದ್ವತ್‍ಗೆ ಸಾಕ್ಷಿಯಾಗಿದೆ. ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾಗಿದ್ದರು ಎಂದು ಗುಣಗಾನ ಮಾಡಿದರು. ಖ್ಯಾತ ವೈಮಾನಿಕ ವಿಜ್ಞಾನಿ ಡಾ.ರೊದ್ದಂನರಸಿಂಹ ಅವರು ವೈಮಾನಿಕ ವಿಜ್ಞಾನ, ಮೋಡಗಳ ರಚನೆ ಕುರಿತ ಅಂತಾರಾಷ್ಟ್ರೀಯ ಸಂಶೋಧನೆ ನಡೆಸಿದ್ದರು.

ಪದ್ಮಭೂಷಣ, ಪದ್ಮ ವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು ಎಂದು ಸ್ಮರಿಸಿದರು. ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನೆಯನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಹಾಲಿ ಶಾಸಕ ಎಂ.ಸಿ.ಮನಗೂಳಿ ಅವರ ನಿಧನಕ್ಕೆ ವಿಷಾದ ವ್ಯಕ್ತಪಡಿಸಿದರು.

ವಿಧಾನಪರಿಷತ್‍ನ ಧರ್ಮೇಗೌಡ ಸಾವು ಆತಂಕ ಉಂಟು ಮಾಡಿದೆ ಎಂದು ಹೇಳಿ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು.  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಗಲಿದ ಗಣ್ಯರಿಗೆ ಸದನದಲ್ಲಿ ಮೌನ ಆಚರಿಸಲಾಯಿತು.

ವಿಧಾನ ಪರಿಷತ್ ಕಲಾಪದಲ್ಲಿ ಇತ್ತೀಚೆಗೆ ನಿಧನರಾದ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಸೇರಿದಂತೆ 10 ಮಂದಿ ಗಣ್ಯರಿಗೆ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರು ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು. ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಧರ್ಮೇಗೌಡ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದರು.

Facebook Comments