ಬಜೆಟ್’ನಲ್ಲಿ ತೈಲದ ಮೇಲೆ ಹೇರಿರುವ ಸೆಸ್ ವಾಪಸ್ ಪಡೆಯುವಂತೆ ಎಚ್.ವಿಶ್ವನಾಥ್ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Vishwnath--01

ಬೆಂಗಳೂರು, ಜು.10- ರಾಜ್ಯ ಬಜೆಟ್‍ನಲ್ಲಿ ತೈಲದ ಮೇಲೆ ಹಾಕಿರುವ ಕರಭಾರವನ್ನು ಮುಖ್ಯಮಂತ್ರಿಗಳು ವಾಪಸ್ ಪಡೆಯಬೇಕೆಂದು ಮಾಜಿ ಸಚಿವ ಎಚ್.ವಿಶ್ವನಾಥ್ ವಿಧಾನಸಭೆಯಲ್ಲಿ ಒತ್ತಾಯಿಸಿದರು. ಪ್ರಸಕ್ತ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೈಲದ ಮೇಲೆ ವಿಧಿಸಿರುವ ತೆರಿಗೆ ವಾಪಸ್ ಪಡೆದರೆ ಶ್ರೀಸಾಮಾನ್ಯರ ಬದುಕಿಗೆ ಸಹಕಾರಿಯಾಗಲಿದೆ ಎಂದರು.

ಶಾಪಿಂಗ್ ಕಾಂಪ್ಲೆಕ್ಸ್ ಆಗಿದೆ:
ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಿಗೆ ಮಧ್ಯಾಹ್ನ 12 ಗಂಟೆಯ ನಂತರ ಬಾಗಿಲು ಹಾಕಿಸಿ ಮುಖ್ಯಮಂತ್ರಿಗಳು ಜನರ ಸಮಸ್ಯೆ ಆಲಿಸಬೇಕು. ಆಡಳಿತ ಯಂತ್ರದ ವಾಸ್ತವದ ಸ್ಥಿತಿ ಅರ್ಥವಾಗುತ್ತದೆ ಎಂದರು. ಮಧ್ಯಾಹ್ನ 12 ಗಂಟೆಯ ನಂತರ ಬಹುಮಹಡಿ ಕಟ್ಟಡದ ಬಳಿ ಶಾಪಿಂಗ್ ಕಾಂಪ್ಲೆಕ್ಸ್ ರೀತಿ ಆಗುತ್ತದೆ. ಸರ್ಕಾರಿ ನೌಕರರು ಕಚೇರಿಯಲ್ಲಿರುವುದಿಲ್ಲ. ಬಟ್ಟೆ, ತರಕಾರಿ ಎಲ್ಲವೂ ಮಾರಾಟವಾಗುತ್ತದೆ. ಇಲ್ಲಿಗೆ ಬರುವವರಲ್ಲಿ ಬಹಳಷ್ಟು ಮಂದಿ ವರ್ಗಾವಣೆ, ಆಮನವು, ಅನುದಾನ, ಅನುಮೋದನೆ ಇಂತಹ ಕೆಲಸಗಳಿಗೆ ಬರುತ್ತಾರೆ. ಆಡಳಿತ ಕೇಂದ್ರಗಳಲ್ಲಿ ದಲ್ಲಾಳಿಗಳೇ ಇರುತ್ತಾರೆ. ತಾಲ್ಲೂಕು ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾಧಿಕಾರಿ ಕಚೇರಿಯಿಂದ ಕಾರ್ಯದರ್ಶಿ ಕಚೇರಿ ನಡುವೆ ವ್ಯವಹಾರ ನಡೆಯಬೇಕು. ಆದರೆ, ಗ್ರಾಮ ಲೆಕ್ಕಿಗ ಪೊಲೀಸ್ ಕಾನ್‍ಸ್ಟೇಬಲ್ ಕೂಡ ಸಚಿವಾಲಯದ ಮಟ್ಟದಲ್ಲಿ ಆಗುತ್ತಿದೆ. ವರ್ಗಾವಣೆ ವಿಕೇಂದ್ರೀಕರಣ ಆಗದಿ ಹೊರತು ಜನರಿಗೆ ನೀಡುವ ಕಾರ್ಯಕ್ರಮಗಳ ಅನುಷ್ಠಾನ ಸಾಧ್ಯವಿಲ್ಲ ಎಂದರು.

ದುಂದುವೆಚ್ಚಕ್ಕೆ ಕಡಿವಾಣ ಹಾಕಲೇಬೇಕಾಗಿದೆ. ಉದಾಹರಣೆಗೆ ಸಮಾಜ ಕಲ್ಯಾಣ ಇಲಾಖೆ ಒಂದು ಇದ್ದದ್ದು, ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಇಲಾಖೆಗಳಾಗಿವೆ. ಈ ನಾಲ್ಕೂ ಇಲಾಖೆಗಳಿಗೆ ನಾಲ್ವರು ಕಾರ್ಯದರ್ಶಿಗಳು, ನಾಲ್ವರು ಆಯುಕ್ತರು, ಉಪ ಆಯುಕ್ತರಿರುತ್ತಾರೆ. ಇವರಿಗೆಲ್ಲಾ ಅನುದಾನಕ್ಕೆ ಅನುಮೋದನೆ ನೀಡುವ ಕೆಲಸವಿರುತ್ತದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು, ಹಾಸ್ಟೇಲ್ ನೋಡಿಕೊಳ್ಳುವುದು, ಈ ರೀತಿಯಾದರೆ ತೆರಿಗೆದಾರರಿಗೆ ಮಾಡುವ ಮೋಸ ಅಲ್ಲವೆ ಎಂದು ಸದನದ ಗಮನ ಸೆಳೆದರು.
ಜಿಲ್ಲಾ ಪಂಚಾಯ್ತಿಯಲ್ಲೂ 150ರಿಂದ 200 ಮಂದಿ ಅಧಿಕಾರಿ, ಸಿಬ್ಬಂದಿ ಇರುತ್ತಾರೆ. ಯಾರಿಗೂ ಕೆಲಸ ವಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಚೊಚ್ಚಲ ಬಜೆಟ್‍ನಲ್ಲಿ ಮೆಟ್ರೋ ರೈಲು ಮುಂದುವರಿಕೆ, ಅರ್ಧ ವರ್ತುಲ ರಸ್ತೆ, ಆರು ಎಲೆವೇಟೆಡ್ ರಸ್ತೆ ನಿರ್ಮಾಣ ಮಾಡುವುದು, ಕಿದ್ವಾಯಿಯಲ್ಲಿ ಮಕ್ಕಳ ಬೋನ್‍ಮ್ಯಾರೋ, ಟ್ರನ್ಸ್‍ಪ್ಲಾನ್‍ಟೇಷನ್‍ಗೆ ಅನುದಾನ ಒದಗಿಸಿರುವುದು, ಸಿಳ್ಳೆಕ್ಯಾತ, ದೊಂಬಿದಾಸ ಸೇರಿದಂತೆ ಶೋಷಿತ ಸಮುದಾಯಗಳ ಅಭಿವೃದ್ಧಿಗೆ 10 ಕೋಟಿ ನೀಡಿರುವುದು ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಧರ್ಮಪೀಠಕ್ಕೆ 25 ಕೋಟಿ ರೂ. ಅನುದಾನ ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದರು. ಬಾಣಂತಿಯರಿಗೆ ಆರು ತಿಂಗಳ ಕಾಲ 6ಸಾವಿರ ನೀಡುವುದು ಮುಖ್ಯಮಂತ್ರಿಗಳ ಮಾತೃಹೃದಯಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Facebook Comments

Sri Raghav

Admin