ವಿವಿಪ್ಯಾಟ್‍ ವಿಚಾರದಲ್ಲಿ ಪ್ರತಿಪಕ್ಷಗಳಿಗೆ ಮತ್ತೊಮ್ಮೆ ಭಾರೀ ಮುಖಭಂಗ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 22-ಮೊದಲು ವಿವಿಪ್ಯಾಟ್‍ಗಳ ಮತ ಎಣಿಕೆ ನಡೆಸಿ ತಾಳೆ ಮಾಡಿ ನಂತರ ಇವಿಎಂಗಳ ಮತ ಎಣಿಕೆ ನಡೆಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಕೇಂದ್ರ ಚುನಾವಣಾ ಆಯೋಗ ಸಾರಸಗಟಾಗಿ ತಿರಸ್ಕರಿಸಿದೆ.

ಇದರಿಂದ ಪ್ರತಿಪಕ್ಷಗಳಿಗೆ ಮತ್ತೊಮ್ಮೆ ಭಾರೀ ಮುಖಭಂಗವಾಗಿದೆ. ನಿನ್ನೆಯಷ್ಟೇ ಸುಪ್ರೀಂಕೋರ್ಟ್‍ನಲ್ಲಿ ಶೇ.100ರಷ್ಟು ವಿವಿ ಪ್ಯಾಟ್‍ಗಳಲ್ಲಿರುವ ಮತ ಎಣಿಕೆಯನ್ನು ತಾಳೆ ಹಾಕಬೇಕೆಂದು ಸಲ್ಲಿಸಿದ ಅರ್ಜಿ ವಜಾಗೊಂಡಿತ್ತು. ಇದರ ಬೆನ್ನಲ್ಲೇ ಆಯೋಗ ಅವರ ಬೇಡಿಕೆಗಳನ್ನು ತಿರಸ್ಕರಿಸಿದೆ.

ಹಿಂದೆ ಯಾವ ರೀತಿ ಮತ ಎಣಿಕೆ ನಡೆಯುತ್ತಿತ್ತೋ ಅದೇ ಮಾದರಿಯಲ್ಲಿ ನಾಳೆಯೂ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಮೊದಲು ನಾವು ಇವಿಎಂಗಳಲ್ಲಿರುವ ಮತಗಳನ್ನು ಎಣಿಕೆ ಮಾಡಿ ನಂತರ ವಿವಿಪ್ಯಾಟ್‍ಗಳಲ್ಲಿರುವ ಮತಗಳ ತಾಳೆ ಹಾಕಲಿದ್ದೇವೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಹಾಲಿ ಇರುವ ಪ್ರಕ್ರಿಯೆಗಳಲ್ಲಿ ಯಾವುದನ್ನೂ ಬದಲಾವಣೆ ಮಾಡುವುದಿಲ್ಲ.

ಮೊದಲು ವಿವಿಪ್ಯಾಟ್‍ಗಳನ್ನು ತಾಳೆ ಹಾಕಿದರೆ ಮತ ಎಣಿಕೆ ವಿಳಂಬವಾಗಲಿದೆ. ಸಿಬ್ಬಂದಿಗೆ ಇದೇ ರೀತಿ ಮತ ಎಣಿಕೆ ನಡೆಸಬೇಕೆಂದು ತರಬೇತಿ ನೀಡಿದ್ದೇವೆ. ಈಗ ವ್ಯತ್ಯಾಸವಾದರೆ ಇಡೀ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ.ಹಾಗಾಗಿ ವಿರೋಧ ಪಕ್ಷಗಳ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುನೀಲ್ ಆರೋರಾ ತಿಳಿಸಿದ್ದಾರೆ.

ಮತಗಳನ್ನು ತಿರುಚುವ ಸಾದ್ಯತೆ ಇರುವ ಹಿನ್ನೆಲೆಯಲ್ಲಿ ಮೊದಲು ವಿವಿಪ್ಯಾಟ್‍ಗಳಲ್ಲಿರುವ ಮತಗಳನ್ನು ತಾಳೆ ಹಾಕಬೇಕೆಂಬುದು ವಿಪಕ್ಷಗಳ ಬೇಡಿಕೆಯಾಗಿತ್ತು.
ಚಂದ್ರಬಾಬು ನಾಯ್ಡು ಹಾಗೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂ ನಬಿ ಅಜಾದ್ ಸೇರಿದಂತೆ ಒಟ್ಟು 21 ರಾಷ್ಟ್ರೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.

ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ನಾನಾ ಕಡೆ ಇವಿಎಂಗಳನ್ನು ದುರುಪಯೋಗಪಡಿಸಿಕೊಂಡಿರುವುದರ ಬಗ್ಗೆ ವ್ಯಾಪಕ ದೂರು ಬಂದಿದ್ದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಈ ಬೇಡಿಕೆಯನ್ನು ಮುಂದಿಟ್ಟಿತ್ತು. ಆದರೆ ಆಯೋಗ ಹಾಲಿ ಇರುವ ನಿಯಮಾವಳಿಯನ್ನೇ ಮುಂದುವರೆಸುವುದಾಗಿ ತಿಳಿಸಿದೆ.

ಮತ ಎಣಿಕೆ ಮುನ್ನ ಅಂಚೆ ಮತದಾನ ನಂತರ ಇವಿಎಂ ಬಳಿಕ ವಿವಿ ಪ್ಯಾಟ್‍ಗಳ ತಾಳೆ ಮಾಡಲಾಗುವುದು. ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರಗಳ ಐದು ಮತಗಟ್ಟೆಗಳಲ್ಲಿ ವಿವಿಪ್ಯಾಟ್‍ಗಳನ್ನು ತಾಳೆ ಹಾಕಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin