ಲಾಕ್‍ಡೌನ್ ವೇಳೆ ಕರ್ತವ್ಯನಿರತ ಎಎಸ್‍ಐ ಕೈ ಕತ್ತರಿಸಿದ ದುಷ್ಕರ್ಮಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಚಂಡೀಗಢ/ಅಮೃತಸರ, ಏ.12-ಲಾಕ್‍ಡೌನ್ ವೇಳೆ ಕರ್ತವ್ಯದಲ್ಲಿದ್ದ ಸಹಾಯಕ ಪೊಲೀಸ್ ಇನ್ಸ್‍ಪೆಕ್ಟರ್ (ಎಎಸ್‍ಐ) ಕೈಗಳನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕತ್ತರಿಸಿ, ಇಬ್ಬರು ಪೊಲೀಸರನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಪಂಜಾಬ್‍ನ ಪಟಿಯಾಲ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ನಿಹಾಂಗ್ಸ್ (ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು ಮತ್ತು ಸಡಿಲ ನೀಲಿ ಮೇಲಂಗಿ ಧರಿಸಿದ ಸಿಖ್ಖರು) ಗುಂಪಿನ ಐವರು ಈ ಕೃತ್ಯ ಎಸಗಿರುವುದಾಗಿ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 6.15ರಲ್ಲಿ ನಿಹಾಂಗ್ಸ್‍ನ ಗುಂಪೊಂದು ವಾಹನದಲ್ಲಿ ಚಲಿಸುತ್ತಿದ್ದರು. ಲಾಕ್‍ಡೌನ್ ಜಾರಿಯಲ್ಲಿದ್ದ ಕಾರಣ ತರಕಾರಿ ಮಾರುಕಟ್ಟೆ ಬಳಿ ಮಂಡಿ ಮಂಡಳಿಯ ಅಧಿಕಾರಿಗಳು ಅವರನ್ನು ತಡೆದರು. ಆದರೆ ಇದನ್ನು ಲೆಕ್ಕಿಸದೇ ಬ್ಯಾರಿಕೇಡ್ ಮೇಲೆ ವಾಹನ ನುಗ್ಗಿಸಿದ ಶಸ್ತ್ರಸಜ್ಜಿತರು ಪೊಲೀಸರು ಮೇಲೂ ದಾಳಿ ನಡೆಸಿದರು.

ಹರ್‍ಜೀತ್ ಸಿಂಗ್ ಎಂಬ ಎಎಸ್‍ಐ ಕೈಗಳನ್ನು ಕತ್ತರಿಸಿದ ದುಷ್ಕರ್ಮಿಗಳು ಇನ್ನಿಬ್ಬರ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದರೆಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಂದೀಪ್ ಸಿಂಗ್ ಸಿದ್ಧು ತಿಳಿಸಿದ್ದಾರೆ. ಈ ಸಂಬಂಧ ಕೆಲವನ್ನು ಬಂಧಿಸಲಾಗಿದೆ.

ಲಾಕ್‍ಡೌನ್ ವೇಳೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಮತ್ತು ರಕ್ಷಣಾ ಕಾರ್ಯಕರ್ತರ ಮೇಲೆ ದೇಶದ ವಿವಿಧೆಡೆ ಹಲ್ಲೆ ಪ್ರಕರಣಗಳು ಮುಂದುವರಿದಿರುವಾಗಲೇ ಈ ಘಟನೆ ಪೊಲೀಸ್ ಇಲಾಖೆಯಲ್ಲಿ ಆತಂಕ ಮೂಡಿಸಿದೆ.

Facebook Comments

Sri Raghav

Admin