BIG NEWS : ಆಡಳಿತಾರೂಢ ಬಿಜೆಪಿಯ 12ಕ್ಕೂ ಹೆಚ್ಚು ಸಚಿವರು-ಶಾಸಕರಿಗೆ ಭಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.6- ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದ ಬೆನ್ನಲ್ಲೆ ಆಡಳಿತಾರೂಢ ಬಿಜೆಪಿಯಲ್ಲಿ ಸುಮಾರು ಒಂದು ಡಜನ್‍ಗೂ ಅಧಿಕ ಸಚಿವರು ಮತ್ತು ಶಾಸಕರಿಗೆ ಸಿ.ಡಿ ಭೂತ ಕಾಡುತ್ತಿದೆ. ಕಾಂಗ್ರೆಸ್-ಜೆಡಿಎಸ್‍ಗೆ ಕೈ ಕೊಟ್ಟು ಮುಂಬೈಗೆ ತೆರಳಿದ ಸಚಿವರು ಮತ್ತು ಶಾಸಕರಿಗೆ ಸಿ.ಡಿ ಭಯ ಎದುರಾಗಿದ್ದು, ಬಹುತೇಕ ಎಲ್ಲರೂ ನ್ಯಾಯಾಲಯದ ಮೊರೆ ಹೋಗಲು ಸಿದ್ದತೆ ನಡೆಸಿದ್ದಾರೆ.

ಈಗಾಗಲೇ ಸಚಿವರಾದ ಎಸ್.ಟಿ.ಸೋಮಶೇಖರ್, ನಾರಾಯಣಗೌಡ, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್ ಹಾಗೂ ಡಾ.ಕೆ.ಸುಧಾಕರ್ ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿ ವರದಿಗಳನ್ನು ಬಿತ್ತರಿಸದಂತೆ ಹಾಗೂ ಪ್ರಕಟಿಸದಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ನಡುವೆಯೇ ಸಚಿವರಾದ ಶ್ರೀಮಂತ್ ಪಾಟೀಲ್, ಆನಂದ್ ಸಿಂಗ್ ಸಿ.ಪಿ.ಯೋಗೇಶ್ವರ್, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಶಾಸಕರಾದ ಮಹೇಶ್ ಕುಮಠಹಳ್ಳಿ ಸೇರಿದಂತೆ ಇನ್ನು ಕೆಲವು ಸಚಿವರು ಮತ್ತು ಶಾಸಕರು ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಸಚಿವರಾದ ಸುಧಾಕರ್ ಮತ್ತು ಎಸ್.ಟಿ.ಸೋಮಶೇಖರ್ ಮುಂಬೈಗೆ ತೆರಳಿದ್ದ ಶಾಸಕ ಮಿತ್ರರನ್ನು ನಮ್ಮ ರಾಜಕೀಯ ಎದುರಾಳಿಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ನಾವು ಆರು ಜನ ಅಷ್ಟೇ ಅಲ್ಲ. ಇನ್ನು ಹೆಚ್ಚು ಮಂತ್ರಿಗಳು ಕೂಡ ನ್ಯಾಯಾಲಯಕ್ಕೆ ಹೋಗುವವರಿದ್ದಾರೆ. ಇದು ರಾಜಕೀಯ ಪಿತೂರಿ. ಷಡ್ಯಂತ್ರ ನಡೆಯುತ್ತಿದೆ. ಮಾಧ್ಯಮಗಳನ್ನು ಉಪಯೋಗಿಸಿಕೊಂಡು ತೇಜೋವಧೆ ಮಾಡಲಾಗುತ್ತಿದೆ. ಅನೇಕ ವರ್ಷಗಳಿಂದ ಗಳಿಸಿದ ಹೆಸರನ್ನು ಹಾಳು ಮಾಡುವಂತದ್ದು ಹೊಸ ಸಂಸ್ಕೃತಿ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆಲ್ಲ ಇತಿಶ್ರೀ ಹಾಡಬೇಕು. ಹಾಗೆಯೇ ಬಲವಾದ ಕಾನೂನು ತರಬೇಕು ಎಂಬುದರ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಕಾನೂನು ಸಚಿವರು ಹಾಗೂ ಸಿಎಂ ಜೊತೆ ಈ ಬಗ್ಗೆ ಮಾತನಾಡಿದ್ದೇವೆ ಎಂದು ಹೇಳಿದರು.  ಇಂತಹ ಷಡ್ಯಂತ್ರಗಳು ಎಲ್ಲಾ ಕ್ಷೇತ್ರದಲ್ಲಿಯೂ ನಡೆಯುತ್ತಿದೆ.

ಯಾವ ರೀತಿ ಷಡ್ಯಂತ್ರ ಮಾಡಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ನೈಜತೆ ಇದ್ದರೆ ಹೊರಬರಲಿ ನಾವ್ಯಾರು ಕಾನೂನಿಗಿಂತ ದೊಡ್ಡವರಲ್ಲ. ಆದರೆ ಸುಳ್ಳು ಹಾಗೂ ತಪ್ಪು ಪ್ರಚಾರ ಸರಿಯಲ್ಲ ಎಂದು ಆಕ್ಷೇಪಿಸಿದರು.
ಜನರ ಮುಂದೆ ಖಳನಾಯಕರನ್ನಾಗಿ ಮಾಡಲು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೀಗೆ ಮಾಧ್ಯಮಗಳ ಮುಂದೆ ತರ್ತಾರೆ ರಷ್ಯಾ, ದುಬೈನಿಂದ ಸಿಡಿ ಅಪ್‍ಲೋಡ್ ಮಾಡಿಸುವ ತಂತ್ರ ಮಾಡಲಾಗುತ್ತಿದೆ. ಸಾರ್ವಜನಿಕ ಬದುಕಿನಲ್ಲಿ ನಮ್ಮ ನೈಜತೆ, ವ್ಯಕ್ತಿತ್ವ ರೂಪಿಸಿಕೊಂಡವರಿಗೆ ಬದ್ದತೆ ಇರುತ್ತದೆ ಎಂದರು.

ಸತ್ಯವಂತರಿಗೆ ಭಯ ಇಲ್ಲ ಆದರೆ ಹಿಟ್ ಅಂಡ್ ರನ್ ಮಾಡುವ ಜನರಿಗೆ ಭಯ ಬೀಳಬೇಕಾಗಿದೆ. ಮೊದಲ ದಿನ ಸಂತ್ರಸ್ತೆ ಎಂದು ಹೇಳಿದ್ದಾರೆ. ಆದರೆ ಮಹಿಳೆ ಇಲ್ಲಿಯವರೆಗೆ ಯಾಕೆ ಮುಂದೆ ಬಂದಿಲ್ಲ. ಆಕೆಯ ಕುಟುಂಬ ಕೂಡ ಮುಂದೆ ಬಂದಿಲ್ಲ.

ಮಹಿಳೆ ಯಾರು ಏನೂ ಎಂಬುದು ಗೊತ್ತಿಲ್ಲ ಯಾಕೆ ಟಾರ್ಗೆಟ್ ಮಾಡ್ತಾ ಇದ್ದಾರೆ ಅನ್ನೋದು ಗೊತ್ತಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ಮಾಡೋದು ಇಲ್ಲ ಎಂದು ಸಮರ್ಥಿಸಿಕೊಂಡರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಅವೇಶನ ನಡೆಯುವ ಸಮಯದಲ್ಲಿ ನಮ್ಮನ್ನು ಟಾರ್ಗೆಟ್ ಮಾಡಿ ತೇಜೋವಧೆ ಮಾಡುವ ಗುಮಾನಿ ಇತ್ತು. ಹೀಗಾಗಿ ನಾವು ಕೋರ್ಟ್ ಮೊರೆ ಹೋಗಿದ್ದೇವೆ. ಹಿಂದಿನ ಸರ್ಕಾರ ತೆಗೆಯುವಲ್ಲಿ ನಮ್ಮ ಪಾತ್ರ ಇದೆ. ಹೀಗಾಗಿ ನಮ್ಮನ್ನು ಗುರಿಯಾಗಿಸಿಕೊಳ್ಳಲಾಗಿದೆ.

ನಾವುಗಳು ಕೋರ್ಟ್ ಮೊರೆ ಹೋಗಿದ್ದೇವೆ. ಬಜೆಟ್ ಮುಗಿದ ಬಳಿಕ ಮಂಗಳವಾರ ಯಾತಕ್ಕಾಗಿ ಕೋರ್ಟ್ ಮೊರೆ ಹೋದೆವು ಎಂಬುದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದರು.

ನನಗೆ ಇದುವರೆಗೂ ಯಾರು ಬ್ಲಾಕ್‍ಮೇಲ್ ಮಾಡಿಲ್ಲ. ಇಷ್ಟು ವರ್ಷ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಕ್ಷಣಮಾತ್ರದಲ್ಲಿ ಟಿವಿಯಲ್ಲಿ ಏನೋ ಬಂದರೆ ಹೇಗೆ? ನಮ್ಮ ತೇಜೋವಧೆ ಆಗಬಾರದು ಎಂದು ನಾವುಗಳು ಕೋರ್ಟ್‍ಗೆ ಹೋಗಿದ್ದು. ನಮ್ಮ ವಿರುದ್ಧ ಮಾತನಾಡಲೇಬಾರದ್ದು ಅಂತಲ್ಲ. ನನ್ನ ಇಲಾಖೆಯ ಬಗ್ಗೆ, ನನ್ನ ಬಗ್ಗೆ ಟೀಕೆ ಮಾಡಬಹುದು. ಆದರೆ ವೈಯಕ್ತಿವಾಗಿ ತೇಜೋವಧೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು. ನಾನು ಗೃಹ ಮಂತ್ರಿಗಳ ಜೊತೆ ಸಹ ಮಾತನಾಡಿದ್ದೇನೆ. ಈ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ನಮ್ಮ ವಿರುದ್ಧ ಏನೇನೋ ಗೋಲ್‍ಮಾಲ್ ಮಾಡುತ್ತಿದ್ದಾರೆ ಎಂದು ನಮ್ಮ ಹಳೇ ಮಿತ್ರರರು ಮಾಹಿತಿ ನೀಡಿದ್ದರು. ಸತ್ಯ ಹೊರಗಡೆ ಬರುವಷ್ಟರಲ್ಲಿ ಎಲ್ಲಾ ಮಾಧ್ಯಮಗಳಲ್ಲಿ ತೋರಿಸುತ್ತಾರೆ.ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ಗ್ರಾಫಿಕ್ಸ್ ಅಶ್ಲೀಲ ಚಿತ್ರತಡೆಗೆ ಕೋರ್ಟ್‍ಗೆ ಮೊರೆ: ಬೈರತಿ
ಇದೇ ವಿಷಯವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ಸಚಿವರ ಅಭಿವೃದ್ಧಿ ಕಾರ್ಯಗಳಿಗೆ ತಡೆ ಒಡ್ಡಲು ಗ್ರಾಫಿಕ್ಸ್ ಮಾಡಿ ಅಶ್ಲೀಲ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಆರೋಪಿಸಿದರು.
ಸಚಿವ ಸ್ಥಾನದಲ್ಲಿರುವವರು ರಾಜ್ಯವ್ಯಾಪ್ತಿ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಅವರ ಹೆಸರಿಗೆ ಕಳಂಕ ತರಲು ಈ ರೀತಿಯ ದಾರಿ ಹುಡುಕುತ್ತಿದ್ದಾರೆ ಎಂದು ದೂರಿದರು.

ವೇಗವಾಗಿ ಬೆಳೆಯುತ್ತಿರುವ ಯುಗದಲ್ಲಿ ತಂತ್ರಜ್ಞಾನ ಸಹ ಅಷ್ಟೇ ಅಭಿವೃದ್ಧಿ ಹೊಂದಿದೆ. ಯಾರದ್ದೋ ವೀಡಿಯೋ ಗಳಿಗೆ ಸಚಿವರ ಭಾವಚಿತ್ರ ಹಾಕಿ ಸಮಾಜದ ವಾತಾವರಣ ಹಾಳು ಮಾಡಲು ಹೊರಟಿದ್ದಾರೆ ಇಂತಹದಕ್ಕೆಲ್ಲಾ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ಹೆಚ್ಚು ಅಭಿವೃದ್ಧಿ ಮಾಡಿದಂತೆ ನೂರಾರು ವಿರೋಗಳು ಹುಟ್ಟಿಕೊಳ್ಳುತ್ತಾರೆ. ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ನಾವು ಯಾವತ್ತೂ ಕಳೆದುಕೊಳ್ಳುವುದಿಲ್ಲ ಅವರ ನಂಬಿಕೆಗಳಿಗೆ ಮಸಿ ಬಳಿಯುವ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin