ಪ್ರತಿಪಕ್ಷಗಳಿಗೂ ಬಿಸಿ ತುಪ್ಪವಾಗಿ ಪರಿಣಮಿಸಿದ ರಾಸಲೀಲೆ ಪ್ರಕರಣ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.6- ರಾಸಲೀಲೆ ಪ್ರಕರಣ ಆಡಳಿತಾರೂಢ ಬಿಜೆಪಿಗಷ್ಟೇ ಅಲ್ಲ ಪ್ರತಿಪಕ್ಷಗಳಿಗೂ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಿಡಿ ಸೋಟಗೊಂಡ ಬಳಿಕ ಬಹಳಷ್ಟು ಮಂದಿ ಸಚಿವರು, ಶಾಸಕರ ಎದೆಗಳಲ್ಲಿ ಭಯದ ಕರಿ ನೆರಳು ಆವರಿಸಿದೆ. ಕೇವಲ ಆಡಳಿತ ಪಕ್ಷದ ಶಾಸಕರ ಮೇಲಷ್ಟೇ ಅಲ್ಲ ಪ್ರತಿಪಕ್ಷದ ಶಾಸಕರುಗಳು ಕೂಡ ಸಿಡಿಯ ವಿಷ ವರ್ತುಲದಲ್ಲಿ ಸಿಲುಕಿರುವ ಆತಂಕದಿಂದ ಬಳಲುತ್ತಿದ್ದಾರೆ.

ತಾನು ಕಳ್ಳ ಪರರನ್ನು ನಂಬ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾನು ಸರಿ ಇದ್ದೇನೆ. ಆದರೆ ನನ್ನ ಪಕ್ಷದವರು ಬೇರೆಯವರು ಹೇಗಿದ್ದಾರೋ , ಏನು ಮಾಡಿದ್ದಾರೋ ಎಂಬ ಆತಂಕ ಬಹಳಷ್ಟು ನಾಯಕರನ್ನು ಕಾಡುತ್ತಿದೆ.
ರಾಜೀನಾಮೆ ಕೊಟ್ಟಿರುವ ರಮೇಶ್ ಜಾರಕಿಹೊಳಿ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನಮಂಡಲದಲ್ಲಿ ಚರ್ಚೆಯಾಗಲೇಬೇಕಿದೆ. ಆದರೆ ಚರ್ಚೆಯ ಸಂದರ್ಭದಲ್ಲಿ ಯಾವ ನಿಲುವು ವ್ಯಕ್ತವಾಗುವುದು ಎಂಬುದು ಗೊತ್ತಿಲ್ಲ.

ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಮೊಟ್ಟ ಮೊದಲಿಗೆ ಸಚಿವರಿಂದ ರಾಜೀನಾಮೆಯನ್ನೇನೋ ಪಡೆದುಕೊಂಡಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮತ್ತಷ್ಟು ವಿಚಾರಣೆಯಾಗಬೇಕು ಎಂದು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಪಟ್ಟು ಹಿಡಿಯಬಹುದು. ಆದರೆ ಇದು ಮನಃಪೂರ್ವಕವಾದ ಆಗ್ರಹವಂತೂ ಆಗಿರಲಿಕ್ಕಿಲ್ಲ.

ಏಕೆಂದರೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ನಿಂದಲೇ ಹೋಗಿರುವವರು. ಬಿಜೆಪಿ ಸೇರಿದ ಮೇಲೆ ಕಾಂಗ್ರೆಸ್ ನಾಯಕರನ್ನೇ ತಮ್ಮ ನಾಯಕ ಎಂದು ಪ್ರತಿಪಾದಿಸುತ್ತಾ ಬಂದಿರುವವರು. ಸಿಡಿಯಲ್ಲಿ ಕೂಡ ಅವರು ಇದೇ ರೀತಿಯ ಮಾತುಗಳನ್ನು ಆಡಿದ್ದಾರೆ.

ಹೀಗಾಗಿ ಪ್ರಕರಣ ತಾರ್ಕಿಕ ಅಂತ್ಯವಾಗಬೇಕು ಎಂಬ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಇಲ್ಲ. ಒಂದು ವೇಳೆ ಪಕ್ಷದ ನಿರ್ಧಾರ ಎಂಬ ಕಾರಣಕ್ಕಾಗಿ ಉಗ್ರ ರೀತಿಯ ವಾಗ್ದಾಳಿ ನಡೆದರೂ ಕೂಡ ನಾಳೆ ತಮ್ಮದೇ ಪಕ್ಷದ ನಾಯಕರು ಅಥವಾ ಶಾಸಕರ ಬಗ್ಗೆ ಈ ರೀತಿಯ ಸಿಡಿಗಳು ಬಹಿರಂಗವಾಗಿ ಆಗಿನ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬ ಆತಂಕ ಎಲ್ಲರನ್ನು ಕಾಡುತ್ತಿದೆ. ಹೀಗಾಗಿ ನೆಪ ಮಾತ್ರಕ್ಕೆ ಚರ್ಚೆ ಮಾಡಿ ಪ್ರಕರಣಕ್ಕೆ ತೇಪೆ ಹಚ್ಚುವ ಸಾಧ್ಯತೆ ಇದೆ.

Facebook Comments

Sri Raghav

Admin