ಸಿಡಿ ಸೋರಿಕೆ ಭಯದಲ್ಲಿ ‘ಮಿತ್ರಮಂಡಳಿ’..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.6- ರಾಸಲೀಲೆ ಪ್ರಕರಣದ ಸಿಡಿ ಬಹಿರಂಗಗೊಳ್ಳುತ್ತಿದ್ದಂತೆ ಬಾಂಬೆ ಮಿತ್ರಮಂಡಳಿಯಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾನಹಾನಿ ಸುದ್ದಿ ಪ್ರಕಟವಾಗಬಾರದು ಎಂದು ತಡೆ ನೀಡುವಂತೆ ಮುಂಜಾಗ್ರತೆಯಾಗಿ ಬಾಕಿ ಉಳಿದ ಸಚಿವರು ಕೂಡ ಕೋರ್ಟ್ ಮೊರೆ ಹೋಗುವ ಸೂಚನೆ ಸಿಕ್ಕಿದೆ.

ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಈಗಾಗಲೇ ಸಚಿವರಾದ ಡಾ.ಕೆ.ಸುಧಾಕರ್, ಬೈರತಿ ಬಸವರಾಜ, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಶಿವರಾಮ್ ಹೆಬ್ಬಾರ್ ಅವರುಗಳು ನ್ಯಾಯಾಲಯದ ಮೊರೆ ಹೋಗಿದ್ದು, ತಮ್ಮ ವಿರುದ್ಧದ ಮಾನಹಾನಿಯಾಗುವಂತಹ ವಿಷಯಗಳ ಪ್ರಕಟಣೆಗೆ ನಿರ್ಬಂಧ ಹೇರುವಂತೆ ಮನವಿ ಮಾಡಿದ್ದಾರೆ.

ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಎಸ್.ಟಿ.ಸೋಮಶೇಖರ್ ಅವರು ಉಳಿದಿರುವ ಸಚಿವರು ಕೂಡ ಶೀಘ್ರದಲ್ಲೇ ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸರ್ಕಾರ ತರಲು ಕಾರಣಕರ್ತರಾದ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ.

ಅವಮಾನ ಮಾಡಿ ತೇಜೋವಧೆ ಮಾಡುವ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಹಳೆಯ ಮಿತ್ರರಿಂದ ನಮಗೆ ತಿಳಿದುಬಂದಿದೆ. ಹಾಗಾಗಿ ನಮ್ಮ ರಕ್ಷಣೆ ಕೋರಿ ನಿನ್ನೆ ನಾವು ಆರು ಜನ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಇನ್ನುಳಿದವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್ ತಿಳಿಸಿದರು.

ಸರ್ಕಾರವನ್ನು ಬೀಳಿಸಿ ಸರ್ಕಾರ ರಚನೆಯಲ್ಲಿ 15 ಜನ ಪ್ರಮುಖ ಪಾತ್ರ ವಹಿಸಿದ್ದರು. ಇವರ ತೇಜೋವಧೆ ಮಾಡಬೇಕು. ಇವರಿಗೆ ಅವಮಾನ ಮಾಡಬೇಕೆಂದು ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹಾಗಾಗಿ ಏನಾದರೂ ಕ್ರಿಯೇಟ್ ಮಾಡುತ್ತಾರೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ನಾವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ.

ನಿನ್ನೆ ಆರು ಜನ ಅರ್ಜಿ ಸಲ್ಲಿಸಿದ್ದೇವೆ. ಇನ್ನುಳಿದವರೂ ಅರ್ಜಿ ಸಲ್ಲಿಸಲಿದ್ದಾರೆ. ಮೊದಲು ನಮ್ಮ ರಕ್ಷಣೆ ನಾವು ಮಾಡಿಕೊಳ್ಳುತ್ತೇವೆ. ನಂತರ ಒಂದೆರಡು ದಿನಗಳಲ್ಲಿ ಯಾರ ಮೇಲೆ ಅನುಮಾನ ಎಂಬುದು ಗೊತ್ತಾಗುತ್ತದೆ. ನಂತರ ಮುಖ್ಯಮಂತ್ರಿ ಹಾಗೂ ಅಧ್ಯಕ್ಷರಿಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

20 ವರ್ಷ ರಾಜಕಾರಣದಲ್ಲಿದ್ದೇನೆ. ಎರಡು-ಮೂರು ನಿಮಿಷದಲ್ಲಿ ಟಾರ್ಗೆಟ್ ಆದರೆ ಗತಿ ಏನು? ಅದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. ನಮ್ಮನ್ನು ಯಾರೂ ಬ್ಲಾಕ್‍ಮೇಲ್ ಮಾಡಿಲ್ಲ. ತೇಜೋವಧೆಯಿಂದ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದೇವೆ ಎಂದರು.

Facebook Comments

Sri Raghav

Admin