ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ಸಿಜೆ ರಂಜನ್ ಗೊಗಯ್ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.20-ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್(ಸಿಜೆಐ) ಅವರ ವಿರುದ್ಧದ ಸುಪ್ರೀಂಕೋರ್ಟ್‍ನ ಮಾಜಿ ಮಹಿಳಾ ಉದ್ಯೋಗಯೊಬ್ಬರು ಮಾಡಿರುವ ಲೈಂಗಿಕ ಕಿರುಕುಳ ಮತ್ತು ಉಪದ್ರವ ಆರೋಪಗಳು ಇಂದು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಹು ಚರ್ಚೆಗೆ ಎಡೆ ಮಾಡಿಕೊಟ್ಟಿತು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ನಾಲ್ಕು ಪ್ರಮುಖ ಅಂಗಗಳಲ್ಲಿ ಒಂದಾದ ನ್ಯಾಯಾಂಗದ ಅತ್ಯುನ್ನತ ಸ್ಥಾನದಲ್ಲಿರುವ ಗೊಗಯ್ ವಿರುದ್ಧದ ಆ ಮಹಿಳೆ ಮಾಡಿದ ಆರೋಪಗಳು ಸಂಬಂಧ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಪೀಠದಿಂದ ತುರ್ತು ವಿಚಾರಣೆ ನಡೆದ ಪ್ರಸಂಗವೂ ಜರುಗಿತು.

ಈ ಆರೋಪಗಳ ಹಿಂದೆ ದೊಡ್ಡ ಕೈವಾಡವಿದೆ. ನನ್ನನ್ನು ನಿಷ್ಕ್ರಿಯಗೊಳಿಸಲು ಈ ವ್ಯವಸ್ಥಿತ ಪಿತೂರಿ ನಡೆದಿರುವಂತೆ ಕಂಡುಬರುತ್ತಿದೆ. ಇಂಥ ಆರೋಪಗಳನ್ನು ನಂಬಲು ಸಾಧ್ಯವಿಲ್ಲ. ನ್ಯಾಯಾಂಗದ ಅತ್ಯುನ್ನತ ಸ್ಥಾನದಲ್ಲಿದ್ದರೂ ಇಂಥ ಆರೋಪವನ್ನು ನಿರಾಕರಿಸಲು ನಾನು ಇಷ್ಟು ಕೇಳಗೆ ಇಳಿಯಬೇಕಾಗುತ್ತದೆ ಎಂದು ನಾನು ಆಲೋಚಿಸಿರಲಿಲ್ಲ ಎಂದು ಸಿಜೆಐ ನೊಂದು ನುಡಿದರು.

ಸುಪ್ರೀಂಕೋರ್ಟ್ ಸಿಐಜೆ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪಿಗಳನ್ನು ಕೈಬಿಡಲಾಗಿತ್ತು ಎಂಬ ದೂರಿನ ಹಿನ್ನಲೆಯಲ್ಲಿ ಇಂದು ಈ ಪ್ರಕರಣದ ವಿಶೇಷ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯಿತು. ಆ ಮಹಿಳೆ ತನ್ನ ಆರೋಪಗಳನ್ನು ಪ್ರಮಾಣೀಕರಿಸಿದ ಅಫಿಡಾವಿಟ್ ಪ್ರತಿಗಳನ್ನು ಸುಪ್ರೀಂಕೋರ್ಟ್‍ನ 22 ಸ್ಥಾನಿಕ ನ್ಯಾಯಾಧೀಶರಿಗೆ ರವಾನಿಸಿದ್ದರು. ನಂತರ ಇದು ಸಾರ್ವಜನಿಕವಾಗಿ ಬಹಿರಂಗವಾಯಿತು.

ಸಿಜೆಐ ವಿರುದ್ಧ ಆರೋಪ ಮಾಡಿರುವ ಮಹಿಳೆ ಎರಡು ಪ್ರಕರಣಗಳನ್ನು ತಮ್ಮ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಗೊಗಯ್ ಅವರು ಪ್ರಮಾಣವಚನ ಸ್ವೀಕರಿಸಿದ 2018ರ ಅಕ್ಟೋಬರ್ ನಂತರದ ದಿನಗಳಲ್ಲಿ ಈ ಕಿರುಕುಳಗಳು ನಡೆದಿವೆ ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಬಹು ಮಹತ್ವದ ವಿಷಯಗಳ ವಿಚಾರಣೆಗಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ವಿಶೇಷ ಪೀಠವೊಂದನ್ನು ಇಂದು ಬೆಳಗ್ಗೆ ರಚಿಸಲಾಯಿತು.

ಈ ಪೀಠವು ಸಿಜೆಐ ಅವರ ಕೋರ್ಟ್ ನಂ.1ರಲ್ಲಿ ಬೆಳಗ್ಗೆ 10.30ರಿಂದ ವಿಚಾರಣೆ ನಡೆಸಿತು. ಈ ವಿಶೇಷ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಅರುಣ್ ಮಿಶ್ತಾ ಮತ್ತು ಸಂಜೀವ್ ಖನ್ನಾ ಸಹ ಇದ್ದರು.

ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳಿಂದ ವಿಚಲಿತರಾದಂತೆ ಕಂಡು ಬಂದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್, ಈ ಆರೋಪಗಳ ಹಿಂದೆ ದೊಡ್ಡ ಕೈವಾಡವಿದೆ. ನನ್ನನ್ನು ನಿಷ್ಕ್ರಿಯಗೊಳಿಸಲು ಈ ವ್ಯವಸ್ಥಿತ ಪಿತೂರಿ ನಡೆದಿರುವಂತೆ ಕಂಡುಬರುತ್ತಿದೆ.

ಇಂಥ ಆರೋಪಗಳನ್ನು ನಂಬಲು ಸಾಧ್ಯವಿಲ್ಲ. ನ್ಯಾಯಾಂಗದ ಅತ್ಯುನ್ನತ ಸ್ಥಾನದಲ್ಲಿದ್ದರೂ ಇಂಥ ಆರೋಪವನ್ನು ನಿರಾಕರಿಸಲು ನಾನು ಇಷ್ಟು ಕೇಳಗೆ ಇಳಿಯಬೇಕಾಗುತ್ತದೆ ಎಂದು ನಾನು ಆಲೋಚಿಸಿರಲಿಲ್ಲ ಎಂದು ಸಿಜೆಐ ವಿಷಾದದಿಂದ ನುಡಿದರು.

ನ್ಯಾಯಾಂಗದ ವಿವಿಧ ಹುದ್ದೆಗಳಲ್ಲಿ ನಾನು 20 ವರ್ಷಗಳ ಸೇವೆ ಸಲ್ಲಿಸಿದ್ದೇನೆ. ನನ್ನ ಬ್ಯಾಂಕ್ ಬ್ಯಾಲೆನ್ಸ್ ಕೇವಲ 6.80 ಲಕ್ಷ ರೂ.ಗಳು ಮಾತ್ರ ಇದೆ. ನನ್ನನ್ನು ಭ್ರಷ್ಟಾಚಾರ ಅಥವಾ ಲಂಚದ ಆರೋಪದಲ್ಲಿ ಸಿಕ್ಕಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದ ಕೆಲವು ವ್ಯಕ್ತಿಗಳು ಈ ಪಿತೂರಿ ನಡೆಸಿದ್ದಾರ. ನನ್ನ 20 ವರ್ಷಗಳ ನಿಸ್ವಾರ್ಥ ಮತ್ತು ದಕ್ಷ ಸೇವೆಗೆ ಇದು ನನಗೆ ಸಂದ ಪ್ರತಿಫಲ ಎಂದು ನ್ಯಾ. ರಂಜನ್ ಗೊಗಯ್ ಬೇಸರದಿಂದ ಹೇಳಿದರು.

ನಾನು ಈ ಘನ ನ್ಯಾಯಾಲಯದ ಉನ್ನತ ಸ್ಥಾನದಲ್ಲಿ ಕುಳಿತುಕೊಂಡು ಯಾವುದೇ ಅಂಜಿಕೆ-ಅಳುಕು ಇಲ್ಲದೇ ನನ್ನ ಕರ್ತವ್ಯವನ್ನು ಮುಂದುವರಿಸುತ್ತೇನೆ ಎಂದು ಅವರು ದೃಢವಿಶ್ವಾಸದಿಂದ ತಿಳಿಸಿದರು.

ಸನ್ನಿವೇಶ ಮತ್ತು ಸಂದರ್ಭಗಳು ಬಹು ದೂರ ತಲುಪಿವೆ. ಇದರಿಂದಾಗಿ ನಾನು ನ್ಯಾಯಾಲಯದಲ್ಲಿ ಇಂದು ಅಸಾಮಾನ್ಯ ಮತ್ತು ಅಸಾಧಾರಣ ಪ್ರಕರಣದ ವಿಚಾರಣೆ ನಡೆಸಬೇಕಿದೆ ಎಂದು ಅವರು ಹೇಳಿದರು. ನ್ಯಾಯಾಂಗವನ್ನು ಯಾವುದೇ ಕಾರಣಕ್ಕೂ ಬಲಿಪಶು ಮಾಡಲು ಸಾಧ್ಯವಿಲ್ಲ. ಅದಕ್ಕೆ ನಾನು ಅವಕಾಶ ಸಹ ನೀಡುವುದಿಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ನುಡಿದರು.

ಮುಖ್ಯ ನ್ಯಾಯಮೂರ್ತಿ ಗೊಗಯ್ ವಿರುದ್ದ ಲೈಂಗಿಕ ಕಿರುಕುಳ ಆರೋಪಗಳನ್ನು ಕೈಬಿಡಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‍ನ ಹಿರಿಯ ಅಧಿಕಾರಿ ಮುಂದೆ ತಿಳಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನಂತರ ವಿಶೇಷ ವಿಚಾರಣೆ ಪೀಠವೊಂದನ್ನು ರಚಿಸಲಾಗಿದೆ.

ಸಾಲಿಸಿಟರ್ ಜನರಲ್ ಅವರ ಆರೋಪವನ್ನು ನಿರಾಕರಿಸಿರುವ ಸುಪ್ರೀಂಕೋರ್ಟ್ ಸೆಕ್ರಟರಿ ಜನರಲ್ ಸಂಜೀವ್ ಸುಧಾಕರ್ ಕಲ್‍ಗಾಂವ್ಕರ್, ಸಂಬಂಧಪಟ್ಟ ಮಹಿಳೆಯ ಮಾಡಿರುವ ಆರೋಪಗಳು ದುರುದ್ದೇಶಪೂರ್ವಕ, ದ್ವೇಷಪೂರಿತ ಮತ್ತು ಆಧಾರವಿಲ್ಲದ್ದು ಎಂದು ತಿಳಿಸಿದ್ಧಾರೆ.

ಇದು ದುರುದ್ದೇಶಪೂರ್ವಕ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಈಗಿನಿಂದಲೇ ಈ ಪ್ರಕರಣದ ವಿಚಾರಣೆ ನಡೆಯಲಿದೆ ಎಂದರು.
ಈ ಸಂಬಂಧ ಮಹಿಳೆ ಬರೆದಿರುವ ಪತ್ರವನ್ನು ಹಲವು ನ್ಯಾಯಾಧೀಶರಿಂದ ಸ್ವೀಕೃತವಾಗಿವೆ ಎಂದು ಸಹ ಕಲ್‍ಗಾಂವ್ಕರ್ ದೃಢಪಡಿಸಿದ್ದಾರೆ.

ಸಿಜೆಐ ಅವರು ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪಗಳು ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸುವ ವಿವೇಚನೆ ಮಾಧ್ಯಮಗಳಿಗೆ ಸೇರಿದ್ದು ಎಂದು ಹೇಳಿದ ಅವರು, ನ್ಯಾಯಾಂಗವು ಸ್ವಾತಂತ್ರ್ಯವಾಗಿ ಕಾರ್ಯನಿರ್ವಹಿಸುವುದಕ್ಕೆ ತುಂಬಾ ದೊಡ್ಡ ಆತಂಕ ಎದುರಾಗಿದೆ ಎಂದು ವಿಷಾದಿಸಿದರು.
ನ್ಯಾಯಾಂಗದ ಸ್ವಾತಂತ್ರ್ಯ ಕಾರ್ಯನಿರ್ವಹಣೆಯನ್ನು ಎತ್ತಿ ಹಿಡಿಯಲು ಸಾರ್ವಜನಿಕ ಬಹು ಮಹತ್ವದ ವಿಷಯಗಳ ವಿಚಾರಣೆಗಾಗಿ ವಿಶೇಷ ಪೀಠವೊಂದನ್ನು ರಚಿಸಲಾಗಿದೆ ಎಂದು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ತಿಳಿಸಿದ್ದಾರೆ.

Facebook Comments

Sri Raghav

Admin