ಅಮಿತ್ ಷಾಗೆ ದೂರು ನೀಡಲು ಭಿನ್ನಮತೀಯ ಶಾಸಕರು ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.17-ಸಚಿವ ಸಂಪುಟ ಸೇರ್ಪಡೆ ಹಾಗೂ ನಿಗಮ ಮಂಡಳಿಯಲ್ಲಿ ಅಧ್ಯಕ್ಷರ ನೇಮಕಾತಿ ಸೇರಿದಂತೆ ಪಕ್ಷ ನಿಷ್ಠರನ್ನು ಕಡೆಗಣಿಸಿ ವಲಸಿಗರಿಗೆ ಮಣೆ ಹಾಕುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೈಖರಿ ವಿರುದ್ಧ ಬಿಜೆಪಿ ಮೂಲ ಶಾಸಕರು ಕೇಂದ್ರ ಸಚಿವ ಅಮಿತ್ ಷಾ ಅವರಿಗೆ ದೂರು ನೀಡಲು ಮುಂದಾಗಿದ್ದಾರೆ.  ಬೆಳಗಾವಿಯಲ್ಲಿ ಇಂದು ಸಂಜೆ ನಡೆಯಲಿರುವ ಜನಸೇವಕ್ ಸಮವೇಶಕ್ಕೂ ಮುನ್ನ ಅಮಿತ್ ಷಾ ಅವರನ್ನು ಶಾಸಕರಾದ ಬಸವಗೌಡ ಪಾಟೀಲ್ ಯತ್ನಾಳ್, ಸಿದ್ದು ಸವದಿ, ಚಂದ್ರಶೇಖರ್ ಬಲ್ಲದ್, ಅಭಯ್ ಪಾಟೀಲ್ ಸೇರಿದಂತೆ ಮತ್ತಿತರ ಭಿನ್ನಮತೀಯ ಶಾಸಕರು ಭೇಟಿಯಾಗಿ ದೂರು ನೀಡುವ ತೀರ್ಮಾನಕ್ಕೆ ಬಂದಿದ್ದಾರೆ.

ಆದರೆ ಈವರೆಗೂ ಅಮಿತ್ ಷಾ ಅವರನ್ನು ಭಿನ್ನಮತೀಯ ಶಾಸಕರು ಭೇಟಿಯಾಗಿ ದೂರು ನೀಡುವ ಬಗ್ಗೆ ಸಮಯ ಅವಕಾಶ ನಿಗದಿಯಾಗಿಲ್ಲ.  ಸಚಿವ ಮುರುಗೇಶ್ ನಿರಾಣಿ ಒಡೆತನದ ಬಾಗಲಕೋಟೆ ಜಿಲ್ಲೆಯ ಯರಕಲಮಟ್ಟಿಯಲ್ಲಿ ಯಥಿನಾಲ್ ಕಾರ್ಖಾನೆಯನ್ನು ಉದ್ಘಾಟಿಸಿದ ನಂತರ ಬೆಳಗಾವಿಗೆ ಅಮಿತ್ ಷಾ ಆಗಮಿಸಲಿದ್ದಾರೆ.

ಮಧ್ಯಾಹ್ನ 1.15ರಿಂದ 3.30ಗೆ ಬೆಳಗಾವಿಯ ಸರ್ಕಿಟ್‍ಹೌಸ್‍ನಲ್ಲಿ ಭೋಜನ ಸ್ವೀಕರಿಸಿ ವಿಶ್ರಾಂತಿ ಪಡೆಯುವರು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಇರಲಿದ್ದಾರೆ.  ಈ ವೇಳೆ ಸಂಪುಟದಲ್ಲಿ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿರುವ ಭಿನ್ನಮತೀಯ ಶಾಸಕರು ಭೇಟಿಯಾಗಿ ಪಕ್ಷದ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಷಾಗೆ ದೂರು ಕೊಡುವರು.

ಕಳೆದ ವಾರ ವಿಸ್ತರಣೆಯಾದ ಸಂಪುಟದಲ್ಲಿ ಪಕ್ಷ ನಿಷ್ಠರಿಗಿಂತ ಹೆಚ್ಚಾಗಿ ಸಂಪುಟದಲ್ಲಿ ವಲಸಿಗರಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಇದರಿಂದ ನಿಷ್ಠಾವಂತ ಕಾರ್ಯಕರ್ತರಿಗೆ ನೋವು ತಂದಿದೆ ಎಂಬುದನ್ನು ಗಮನಕ್ಕೆ ತರಲಿದ್ದಾರೆ.  ಕಳೆದ ವಿಧಾನಸಭೆಯಲ್ಲಿ ಪರಾಭವಗೊಂಡಿದ್ದ ಲಕ್ಷ್ಮಣ್ ಸವದಿಯನ್ನು ಸಂಪುಟಕ್ಕೆ ತೆಗೆದುಕೊಂಡಾಗಲೇ ಅನೇಕ ಶಾಸಕರು ಅಸಮಾಧಾನಗೊಂಡಿದ್ದರು. ಇದೀಗ ಪುನಃ ಯೋಗೀಶ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿರುವುದರಿಂದ ನಾಲ್ಕೈದು ಬಾರಿ ಗೆದ್ದಿರುವ ಶಾಸಕರು ಅಸಮಾಧಾನಗೊಂಡಿದ್ದಾರೆ.

ವಲಸಿಗರಿಗೆ ಸಂಪುಟದಲ್ಲಿ ಮಣೆ ಹಾಕಿ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ. ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಕೇಂದ್ರ ಗೃಹ ಸಚಿವರಲ್ಲಿ ಮನವಿ ಮಾಡಲಿದ್ದಾರೆ.  ಅನೇಕ ಸಚಿವರು, ಶಾಸಕರ ಕೆಲಸಗಳನ್ನೇ ಮಾಡಿಕೊಡುತ್ತಿಲ್ಲ. ಕಾರ್ಯಕರ್ತರನ್ನು ಸಹ ಕಡೆಗಣಿಸುತ್ತಿದ್ದಾರೆ. ಕೆಲವರು ಅಧಿಕಾರದ ಆಸೆಗಾಗಿ ಪಕ್ಷಕ್ಕೆ ಬಂದಿದ್ದಾರೆ. ಇದರಿಂದ ಪಕ್ಷಕ್ಕಾಗಿ ದುಡಿದ ಸಾವಿರಾರು ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ.

ಬಿಜೆಪಿ ಹೇಳಿಕೇಳಿ ಕಾರ್ಯಕರ್ತರ ಪಕ್ಷ. ಪಕ್ಷ ನಿಷ್ಠರನ್ನೇ ಕಡೆಗಣಿಸುವುದು ಸರಿಯಲ್ಲ. ನಿಗಮಂಡಳಿಯಲ್ಲೂ ಕೂಡ ನಿಷ್ಠಾವಂತರಿಗೆ ನ್ಯಾಯ ಸಿಗುತ್ತಿಲ್ಲ. ಕೇವಲ ಹಿಂಬಾಲಕರಿಗೆ ಮಣೆ ಹಾಕಲಾಗುತ್ತಿದೆ. ಸಿಎಂ ಯಡಿಯೂರಪ್ಪನವರು ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಆಡಳಿತದಲ್ಲಿ ಯಡಿಯೂರಪ್ಪ ಕುಟುಂಬದ ಹಸ್ತಕ್ಷೇಪ ವಿಪರೀತವಾಗಿದೆ.

ಅಧಿಕಾರಿಗಳ ವರ್ಗಾವಣೆ, ನೇಮಕಾತಿ, ಆಯ್ಕೆ ಹೀಗೆ ಪ್ರತಿಯೊಂದರಲ್ಲೂ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ಸರ್ಕಾರ ಯಾವುದೇ ವಿಷಯದಲ್ಲೂ ಕುಟುಂಬ ಸದಸ್ಯರ ಹಸ್ತಕ್ಷೇಪಕ್ಕೆ ಅವಕಾಶ ಕೊಡುತ್ತಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಇಂತಹ ಆರೋಪಗಳು ಕೇಳಿಬರುತ್ತಿಲ್ಲ. ಆದರೆ ರಾಜ್ಯದಲ್ಲಿ ಪದೇ ಪದೇ ಇದು ಮರುಕಳಿಸುತ್ತಲೆ ಎಂಬುದನ್ನು ಷಾ ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.

ಒಂದು ವೇಳೆ ಅಮಿತ್ ಷಾ ಭಿನ್ನಮತೀಯ ಶಾಸಕರ ಭೇಟಿಗೆ ಅವಕಾಶ ನೀಡಿದರೆ ದೂರು ಕೊಡುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Facebook Comments