ಶಾಹಿನ್ ಶಾಲಾ ಆಡಳಿತ ಮಂಡಳಿ ವಿರುದ್ದ ದೇಶದ್ರೋಹ ಪ್ರಕರಣ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.29- ಗಣರಾಜ್ಯೋತ್ಸವ ದಿನದಂದು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉದ್ದೇಶಪೂರ್ವಕವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅವಹೇಳನಕಾರಿ ಘೋಷಣೆ ಕೂಗಿದ ಆರೋಪದ ಮೇಲೆ ಶಾಲಾ ಆಡಳಿತ ಮಂಡಳಿ ವಿರುದ್ದ ದೇಶದ್ರೋಹ ಪ್ರಕರಣ ದಾಖಲಾಗಿದೆ.  ಬೀದರ್‍ನ ಪ್ರತಿಷ್ಠಿತ ಶಾಹಿನ್ ಗ್ರೂಪ್ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಯಾದ ಶಾಹಿನ್ ಶಾಲಾ ಆಡಳಿತ ಮಂಡಳಿ ವಿರುದಧ ಬೀದರ್ ಪೊಲೀಸರು ರಾಷ್ಟ್ರ ದ್ರೋಹ ಪ್ರಕರಣ ದಾಖಲಿಸಿದ್ದಾರೆ.

ಶಾಲಾ ಆಡಳಿತ ಮಂಡಳಿ ವಿರುದ್ಧ ಸೆಕ್ಷನ್ 124ಎ( ದೇಶದ್ರೋಹ), 504(ಶಾಂತಿ ಕದಡುವುದು), 505(2)(ದ್ವೇಷವನ್ನು ಉತ್ತೇಜಿಸುವಿಕೆ), 153ಎ( ಕೋಮುದ್ವೇಷ ಉತ್ತೇಜಿಸುವುದು) ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.  ಇದೀಗ ಶಾಲಾ ಮಂಡಳಿ ವಿರುದ್ಧ ಏಫ್‍ಐಆರ್ ದಾಖಲಿಸಿರುವ ಬೀದರ್‍ನ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡದಿದ್ದರೆ ಕಾನೂನಿನ ಪ್ರಕಾರ ಶಿಕ್ಷೆ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಪೊಲೀಸರು ಶಾಲೆಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿದ್ದರು. ಗಣರಾಜ್ಯೋತ್ಸವದ ದಿನದಂದು ಸಿಎಎ ಹಾಗೂ ಪ್ರಧಾನಿ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಲು ಹೇಳಿಕೊಟ್ಟವರು ಯಾರು? ಹೀಗೆ ಹೇಳುವಂತೆ ಶಿಕ್ಷಕರು ಹೇಳಿದ್ದರೇ? ಪ್ರಧಾನಿ ವಿರುದ್ದ ಏಕೆ ಇಂಥ ಅವಹೇಳನಕಾರಿ ಹೇಳಿಕೆ ನೀಡಿದ್ದೀರಿ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದರು.  ಮೇಲ್ನೋಟಕ್ಕೆ ಶಾಲಾ ಆಡಳಿತ ಮಂಡಳಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಭಾನುವಾರ ಗಣರಾಜ್ಯೋತ್ಸವದ ದಿನಾಚರಣೆ ಹಿನ್ನೆಲೆಯಲ್ಲಿ ಬೀದರ್‍ನಲ್ಲಿರುವ ಶಾಹಿನ್ ಶಾಲೆಯಲ್ಲಿ ಸಿಎಎ ಹಾಗೂ ಎನ್‍ಸಿಆರ್ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಬೇಕೆಂದು ಕೆಲವರು ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದರು ಎನ್ನಲಾಗುತ್ತಿದೆ. ಯಾವುದೇ ಕಾರಣಕ್ಕೂ ನಾವು ಸಿಎಎ ಹಾಗೂ ಎನ್‍ಸಿಆರ್ ಅನ್ನು ಒಪ್ಪುವುದಿಲ್ಲ. ನಿಮ್ಮ ಮನೆಗೆ ಯಾರಾದರೂ ಬಂದು ದಾಖಲೆಗಳನ್ನು ಕೇಳಿದರೆ ಕೊಡಬೇಡಿ, ನಾವು ಈ ಕಾಯ್ದೆಯನ್ನು ವಿರೋಧಿಸುತ್ತೇವೆ ಎಂದು ವಿದ್ಯಾರ್ಥಿಗಳು ಕೂಗಿದ್ದರು.

ಚಪ್ಪಲಿಯಲ್ಲಿ ಹೊಡೆಯುತ್ತೇವೆ: ಕೇವಲ ಕೇಂದ್ರ ಸರ್ಕಾರದ ವಿರುದ್ಧ ಕೂಗಿದ್ದರೆ ಪ್ರಕರಣ ಇಷ್ಟು ಗಂಭೀರತೆ ಪಡೆದುಕೊಳ್ಳುತ್ತಿರಲಿಲ್ಲ. ಒಂದು ಹಂತದಲ್ಲಿ ವಿದ್ಯಾರ್ಥಿಗಳು ನಮ್ಮ ಮನೆಗೆ ಬಂದು ಯಾವುದಾದರೂ ಅಧಿಕಾರಿಗಳು ಬಂದು ದಾಖಲೆಗಳನ್ನು ಕೇಳಿದರೆ ಚಪ್ಪಲಿಯಲ್ಲಿ ಹೊಡೆಯುತ್ತೇವೆ ಎಂದು ವಿದ್ಯಾರ್ಥಿಗಳು ದಿಕ್ಕಾರದ ಘೋಷಣೆಗಳನ್ನು ಕೂಗಿದ್ದರು.

ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕೆಲವು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಬಿವಿಪಿ ಹಾಗೂ ಹಿಂದೂಪರ ಸಂಘಟನೆಗಳು ಶಾಲಾ ಆಡಳಿತ ಮಂಡಳಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪ್ರತಿಭಟನೆ ನಡೆಸಿದ್ದರು.

ಪ್ರಕರಣ ಕುರಿತಂತೆ ಬೀದರ್ ಎಸ್‍ಪಿ ಟಿ.ಶ್ರೀಧರ ಪ್ರತಿಕ್ರಿಯಿಸಿದ್ದು, ನಾವು ಕೆಲವು ವಿದ್ಯಾರ್ಥಿಗಳನ್ನು ಶಾಲೆಯಲ್ಲೇ ವಿಚಾರಣೆಗೊಳಪಡಿಸಿದ್ದೆವು. ಇದರಲ್ಲಿ ಶಿಕ್ಷಕರು ಇಲ್ಲವೇ ಬೇರೆಯವರ ಕೈವಾಡವಿದೆ ಎಂಬ ಕುರಿತಂತೆ ಮಾಹಿತಿ ಕಲೆ ಹಾಕಿದ್ದೇವೆ. ಕೆಲವು ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಪ್ರಚೋದನೆ ನೀಡಲಾಗಿದೆ. ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಿನ ಪ್ರಕಾರವೇ ಶಿಕ್ಷೆ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

Facebook Comments