ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸತ್ಯಾಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಮಾ.25- ಅಸಹಾಯಕ ಮಹಿಳೆಗೆ ಹಕ್ಕು ಪತ್ರ ನೀಡದೆ ಸತಾಯಿಸುತ್ತಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಪುತ್ತೂರು ತಾಲ್ಲೂಕು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ಸೀತಮ್ಮ ಎಂಬ ಮಹಿಳೆ ಕಳೆದ 20ವರ್ಷಗಳ ಹಿಂದೆ ಸಣ್ಣದಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ಅದಕ್ಕೆ ಡೋರ್ ನಂಬರ್ ಕೂಡ ಹಾಕಲಾಗಿದೆ. ಕಂದಾಯವನ್ನೂ ಪಾವತಿ ಮಾಡುತ್ತಿದ್ದಾರೆ. ಇದೇ ವಿಳಾಸದಲ್ಲಿ ಆಧಾರ್ ಕಾರ್ಡ್ ಇದೆ. ಈ ಎಲ್ಲಾ ದಾಖಲೆಗಳು ಇದ್ದರೂ ಕೂಡ 20 ವರ್ಷಗಳಿಂದಲೂ ಹಕ್ಕು ಪತ್ರ ನೀಡಲು ತಾಲ್ಲೂಕು ಆಡಳಿತ ಸತಾಯಿಸುತ್ತಿದೆ.

ಮನೆ ಕೆಲಸ ಮಾಡುತ್ತಿದ್ದ ಸೀತಮ್ಮ ತಮ್ಮ ಹಕ್ಕಿಗಾಗಿ ಕಂಡ ಕಂಡವರ ಬಳಿ ಅಂಗಲಾಚಿದರೂ ನ್ಯಾಯ ಸಿಕ್ಕಿಲ್ಲ. ಕೊನೆಗೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಮೊರ ಹೋಗಿದ್ದಾರೆ. ಖುದ್ದು ಶಕುಂತಲಾ ಶೆಟ್ಟಿ ಅವರೇ ಅಧಿಕಾರಿಗಳ ಜತೆ ಮಾತನಾಡಿ, ಕಾನೂನು ಬದ್ಧವಾಗಿರುವ ಪ್ರಕರಣದಲ್ಲಿ ಹಕ್ಕು ಪತ್ರ ನೀಡಲು ಸಮಸ್ಯೆ ಏನು ಎಂದು ಪ್ರಶ್ನಿಸಿದ್ದಾರೆ. ನಾಳೆ ಹಕ್ಕು ಪತ್ರ ನೀಡುವುದಾಗಿ ಅಧಿಕಾರಿಗಳು ಉತ್ತರಿಸಿದ್ದಾರೆ. ಈ ನಾಳೆ ಎಂಬ ಉತ್ತರ ಕಳೆದ ಫೆಬ್ರವರಿಯಿಂದಲೂ ಅಧಿಕಾರಿಗಳಿಂದ ಕೇಳಿ ಬರುತ್ತಿದೆ. ಸೀತಮ್ಮ ಅವರು ವಾರಕ್ಕೆ ಮೂರು ದಿನ ತಾಲ್ಲೂಕು ಕಚೇರಿಗೆ ಅಲೆಯುತ್ತಲೇ ಇದ್ದಾರೆ. ಆದರೂ ಹಕ್ಕು ಪತ್ರ ಮಾತ್ರ ಸಿಕ್ಕಿಲ್ಲ.

ಹೀಗಾಗಿ ಬೇಸತ್ತಿರುವ ಶಕುಂತಲಾ ಶೆಟ್ಟಿ ಅವರು ಇಂದು ಸಂಜೆ 5 ಗಂಟೆ ಒಳಗಾಗಿ ಮಹಿಳೆಗೆ ಹಕ್ಕು ಪತ್ರ ನೀಡದಿದ್ದರೆ ನಾಳೆ ಪುತ್ತೂರಿನ ಮಿನಿ ವಿಧಾನಸೌಧದ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಅಧಿಕಾರಿಗಳು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಈ ಬಗ್ಗೆ ಈ ಸಂಜೆಯೊಂದಿಗೆ ಮಾತನಾಡಿದ ಶಕುಂತಲಾ ಶೆಟ್ಟಿ ಅವರು, ಸೀತಮ್ಮ ಅನಕ್ಷರಸ್ಥೆ. ಆಕೆಗೆ ಮಕ್ಕಳಿಲ್ಲ. ಬಡತನದ ಜೀವನ. ಕಷ್ಟ ಪಟ್ಟು ಕಟ್ಟಿಕೊಂಡಿರುವ ಮನೆಗೆ ಕಾನೂನುಬದ್ದವಾಗಿದ್ದರೂ ಹಕ್ಕು ಪತ್ರ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Facebook Comments