ಶಾಮನೂರು ವಿರುದ್ಧ ಲಿಂಗಾಯಿತ ಮಹಾಸಭಾ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ,ಸೆ.7- ಲಿಂಗಾಯತ ಧರ್ಮದಲ್ಲಿ ಬರುವ 101 ಉಪಪಂಗಡಗಳಲ್ಲಿ ವೀರಶೈವವು ಒಂದು ಉಪಪಂಗಡ. ಆ ಕಾರಣ ಆ ವೀರಶೈವರೆಲ್ಲರೂ ಲಿಂಗಾಯತರು, ಶಾಮನೂರು ಶಿವಶಂಕರಪ್ಪ ಸರಿಯಾಗಿ ಅರ್ಥಮಾಡಿಕೊಳ್ಳದೆ, ಕೇವಲ ರಾಜಕೀಯ ಉದ್ದೇಶಗಳಿಗಾಗಿ ಅಸಂಬದ್ಧ ಹೇಳಿಕೆ ನೀಡುತ್ತಾ ಸಮಾಜವನ್ನು ದಿಕ್ಕು ತಪ್ಪಿಸಬಾರದು. ಅಲ್ಲದೇ ತಮ್ಮ ಮೇಲಿನ ಗೌರವ ಕಳೆದುಕೊಳ್ಳಬಾರದು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಅಗಡಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ವಿಸ್ತ್ರತ ಚರ್ಚೆಯ ಮುಲಕ ಸಮಾಜದ ಜನತೆಗೆ ತಿಳಿಸಲು ವೀರಶೈವ ಮಹಾಸಭೆ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ಕೂಡಲೇ ಜಂಟಿ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು.

ಶಾಮನೂರು ಶಿವಶಂಕರಪ್ಪ ಅವರು ತಮ್ಮ ವಯಸ್ಸು ಹಾಗೂ ಸ್ಥಾನದ ಘನತೆ ಗೌರವಗಳನ್ನು ಕಾಪಾಡಿಕೊಂಡು ಮಾತನಾಡಬೇಕು. ಡಾ.ಜಾಮದಾರ ಅವರು ರಾಜ್ಯ ಕಂಡ ಅಪರೂಪದ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅವರ ಅಧಿಕಾರ ಅವಧಿಯಲ್ಲಿ ಕೂಡಲಸಂಗಮ, ಬಸವಕಲ್ಯಾಣಗಳ ಅಭಿವೃದ್ಧಿ, ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ, ಭೂಮಿ ಕಳೆದುಕೊಂಡವರಿಗೆ ನೇರ ಹಾಗೂ ಯೋಗ್ಯ ಪರಿಹಾರ ಮುಂತಾದ ಹತ್ತು ಹಲವು ಸಮಾಜ ಮುಖಿ ಕಾರ್ಯ ಮಾಡಿ ರಾಜ್ಯದ ಜನತೆಯ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಇದಲ್ಲದೇ ಲಿಂಗಾಯತ ಧರ್ಮದ ಬಗ್ಗೆ ಆಳವಾದ ಅಭ್ಯಾಸದ ಮುಲಕ ಹಲವಾರು ಮೌಲಿಕ ಪುಸ್ತಕಗಳನ್ನು ಬರೆದಿದ್ದಾರೆ. ಆದರೆ, ಹಲವರಿಗೆ ಈಗ ಹುಚ್ಚಾಸ್ಪತ್ರೆ ನೆನಪಾಗುತ್ತದೆ. ಉಳಿದವರಂತೆ ಅವರೆಂದು ಸುಮ್ಮನೆ ಮಾತನಾಡುವದಿಲ್ಲ, ಅವರ ಮಾತಿಗೆ ನೂರೊಂದು ಸಾಕ್ಷಿ ಪುರಾವೆಗಳು ಇರುತ್ತವೆ. ಕಾರಣ ಅವರೊಂದಿಗೆ ಮಾತನಾಡಿ, ಆಗ ಅವರು ತಮ್ಮ ನಿಲುವನ್ನು ಬದಲಿಸಿದರೆ ನಾವು ನಿಮ್ಮ ಹೇಳಿಕೆಯನ್ನು ಸ್ವಾಗತಿಸುತ್ತವೆ.

ಆಗ ಸವಕಲು ಯಾವುದೂ ಖೊಟ್ಟೆ ಯಾವುದೂ ಎಂದು ಸಮಾಜಕ್ಕೆ ಮನವರಿಕೆಯಾಗುತ್ತದೆ ಎಂದು ಹೇಳಿದರು. ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಗಾಗಿ ಹಲವು ದಶಕಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟ ಕೆಲವೊಮ್ಮೆ ಆಂತರಿಕ, ಕೆಲವೊಮ್ಮೆ ಬಹಿರಂಗವಾಗಿ ನಡೆಯುತ್ತಿದ್ದರ ಪರಿಣಾಮವಾಗಿ, ನ್ಯಾಯಮೂರ್ತಿ ನಾಗಮೋಹನದಾಸ ವರದಿಯನ್ನು ಅಂದಿನ ಸರ್ಕಾರ ಅಂಗೀಕರಿಸಿ, ಕೇಂದ್ರ ಸರ್ಕಾರದ ಅನುಮೋದನೆಗೆ ಕಳಿಸಿತ್ತು. ಅಲ್ಲದೇ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ಸಿಗುವ ದಿನಗಳು ಬಹು ದೂರವಿಲ್ಲ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಸವನಾಳು ಮರುಳಸಿದ್ದಯ್ಯ, ಹಿರಿಯ ಉಪಾಧ್ಯಕ್ಷ ಹುಚ್ಚಪ್ಪ ಮಾಸ್ತರ್ ಹಾಜರಿದ್ದರು.

Facebook Comments