ಸಿಎಂ ಬಿಎಸ್‍ವೈ ನಿರ್ಧಾರಕ್ಕೆ ಶಂಕರ್ ಬಿದರಿ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.25-ವರ್ತೂರು ಕೋಡಿ ಸರ್ಕಲ್‍ಗೆ ಮಧುಕರ್ ಶೆಟ್ಟಿ ಹೆಸರನ್ನು ನಾಮಕರಣ ಮಾಡಲು ಬಿಬಿಎಂಪಿ ಸಲ್ಲಿಸಿದ ಪ್ರಸ್ತಾವನೆಯನ್ನು ತರಿಸ್ಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಕಿಡಿಕಾರಿದ್ದಾರೆ.  ಮಧುಕರ್ ಶೆಟ್ಟಿ ಅವರು ತಮ್ಮ ಸೇವಾವಧಿಯಲ್ಲಿ ನಿಷ್ಪಕ್ಷಪಾತವಾಗಿ ಸಿದ್ದಾಂತ ಆಧಾರಿತ ಜೀವನ ನಡೆಸಿದರು.

ಯಾವುದೇ ಪಕ್ಷ, ವ್ಯಕ್ತಿ ಪರವಾಗಿ ಕೆಲಸ ಮಾಡಲಿಲ್ಲ. ಸ್ವತಃ ಅವರ ಬಂಟ್ ಸಮುದಾಯದ ಪರವಾಗಿಯೂ ಕೂಡ ಕೆಲಸ ಮಾಡಲಿಲ್ಲ. ಅತ್ಯಂತ ಆದರ್ಶಮಯ ಸೇವೆ ಅವರದ್ದಾಗಿತ್ತು ಎಂದು ಹೇಳಿದ್ದಾರೆ. ಮಧುಕರ್ ಶೆಟ್ಟಿ ಅವರು ನನಗೆ ಮಗನ ಸಮಾನ. ಅವರು ಕೂಡ ನನ್ನನ್ನು ತಂದೆಯ ರೀತಿಯಲ್ಲೇ ತುಂಬ ಗೌರವ, ಪ್ರೀತಿಯಿಂದ ಕಾಣುತ್ತಿದ್ದರು. ರಾಜ್ಯ ಸರ್ಕಾರ ವರ್ತೂರು ಕೋಡಿವೃತ್ತಕ್ಕೆ ಮಧುಕರ್ ಶೆಟ್ಟಿ ಅವರ ಹೆಸರನ್ನು ನಾಮಕರಣ ಮಾಡಲು ದ್ವೇಷಪೂರಿತ ನಿರ್ಧಾರ.

ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ಮಧುಕರ್ ಶೆಟ್ಟಿ ಅವರನ್ನು ಗೌರವಿಸಲಿವೆ. ಪ್ರಾಮಾಣಿಕ , ದಕ್ಷ ಅಧಿಕಾರಿಗಳಿಗೆ ನ್ಯಾಯ ದೊರಕಿಸಿ ಅವರು ಪ್ರತಿಪಾದಿಸುವ ಮೌಲ್ಯಗಳನ್ನು ಎತ್ತಿ ಹಿಡಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ಬಿ.ಡಿ.ಜತ್ತಿ, ಕಂಠೀ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಎಸ್.ಆರ್.ಬೊಮ್ಮಾಯಿ ಅವರಂತಹ ಮುಖ್ಯಮಂತ್ರಿಗಳನ್ನು ಕಂಡಿದ್ದು, ಇವರೆಲ್ಲರೂ ದಕ್ಷ ಅಧಿಕಾರಿಗಳನ್ನು ಘನತೆಯಿಂದ ನಡೆಸಿಕೊಂಡರು.

ಮಾಜಿ ಪ್ರಧಾನಿ ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ಕಾನ್‍ಸ್ಟೆಬಲ್ ತಿಮ್ಮಯ್ಯ ಅವರ ಹೆಸರನ್ನು ರಾಜಭವನ್ ಸಮೀಪ ವೃತ್ತವೊಂದಕ್ಕೆ ನಾಮಕರಣ ಮಾಡಲು ಸಮ್ಮತಿಸಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

ನಿವೃತ್ತಿ ನಂತರ ಶಂಕರ್ ಬಿದರಿ ಅವರು ಒಂದಿಷ್ಟು ಕಾಲ ಬಿಎಸ್‍ಪಿಯಲ್ಲಿ ಮತ್ತೆ ಸ್ವಲ್ಪದಿನ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದರು. ಈ ನಡುವೆ ಮತ್ತೊಂದು ಪಕ್ಷಕ್ಕೆ ಹೋಗಿಯೂ ರಾಜಕೀಯದಲ್ಲಿ ಯಶಸ್ಸು ಗಳಿಸಲು ಪ್ರಯತ್ನಿಸಿದರು. ಕೊನೆಗೆ ಬಿಜೆಪಿ ಸೇರಿದ್ದಾರೆ. ಬಿಜೆಪಿಯಲ್ಲಿ ಇದ್ದುಕೊಂಡೇ ಮುಖ್ಯಮಂತ್ರಿಯವರ ವಿರುದ್ದ ಶಂಕರ್ ಬಿದರಿ ಅವರು ಕಿಡಿಕಾರಿರುವುದು ಅಚ್ಚರಿಗೆ ಕಾರಣವಾಗಿದೆ.

Facebook Comments