ಶಂಕರ್ ನಾಗ್ ನೆನಪು ಅಜರಾಮರ

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕದ ಹೊನ್ನಾವರದಲ್ಲಿ ನವೆಂಬರ್ 9 , 1954ರಂದು ಜನಿಸಿದ ಭವಾನಿಶಂಕರ್ (ಶಂಕರ್‍ ನಾಗ್) ಎಂಬ ಬಾಲಕ ನಂತರ ಕನ್ನಡ ಚಿತ್ರರಂಗದಲ್ಲಿ ಧ್ರುವತಾರೆಯಾಗಿ ಮೆರೆದವರು. ಆಟೋ ಚಾಲಕರ ಕಣ್ಮಣಿಯಾಗಿರುವ ಶಂಕರ್‍ ನಾಗ್ ಇಂದು ಬದುಕಿದ್ದರೆ ಅವರಿಗೆ 66 ವರ್ಷಗಳ ಸಂಭ್ರಮ. ಅವರು ಈಗ ನಮ್ಮೊಂದಿಗೆ ಇಲ್ಲದಿದ್ದರೂ ಆಟೋ ಚಾಲಕರ ಸದಾ ಆರಾಧ್ಯದೈವವರಾಗಿರುವ ಶಂಕರ್‍ನಾಗ್ ಅವರು ನಟಿಸಿರುವ ಚಿತ್ರಗಳ ಮೂಲಕ ಸದಾ ಹಸಿರಾಗಿಯೇ ಉಳಿದಿದ್ದಾರೆ.

ಶಂಕರ್‍ ನಾಗ್‍ರವರಲ್ಲಿ ಇದ್ದ ಜೀವನೋತ್ಸಾಹವು ಇಂದಿಗೂ ಹಲವು ನಟರಿಗೆ ಮಾದರಿಯಾಗಿದೆ. ಆದ್ದರಿಂದಲೇ ನಮ್ಮನ್ನಗಲಿ 3 ದಶಕಗಳೇ ಕಳೆದರೂ ಕೂಡ ಚಿತ್ರ ಪ್ರೇಮಿಗಳ ಮನದಲ್ಲಿ ಭವಾನಿ ಶಂಕರ್ ಅವರು ಇಂದಿಗೂ ಜೀವಂತವಾಗಿ ದ್ದಾರೆ. ಬಾಲ್ಯದಲ್ಲೇ ಕಲಾಲೋಕದ ಒಲವು ಮೂಡಿಸಿಕೊಂಡಿದ್ದ ಶಂಕರ್‍ನಾಗ್ ಅವರು ಮುಂಬೈನಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ವೇಳೆಯೇ ಮಠಾರಿ ರಂಗಭೂಮಿಯ ಕಡೆಗೆ ಆಕರ್ಷಿತರಾದವರು.

ತಮಗೆ ಗೊತ್ತಿಲ್ಲ ದಂತೆ ಮರಾಠಿ ರಂಗಭೂಮಿಯತ್ತ ಒಲವು ಮೂಡಿಸಿಕೊಂಡಿದ್ದ ಶಂಕರ್‍ನಾಗ್ ಅವರು ವಿದ್ಯಾಭ್ಯಾಸದ ನಂತರ ತಮ್ಮ ಸಹೋದರ ಅನಂತ್‍ನಾಗರಕಟ್ಟೆ (ಅನಂತ್‍ನಾಗ್) ಅವರಂತೆ ಬ್ಯಾಂಕ್ ಉದ್ಯೋಗಿಯಾದರೂ ಕೂಡ ತಮ್ಮಲ್ಲಿದ್ದ ಸಂಗೀತ ಹಾಗೂ ರಂಗಭೂಮಿಯ ಒಲವನ್ನು ಮರೆತಿರಲಿಲ್ಲ.

ಶಂಕರ್‍ ನಾಗ್ ಅವರು ಸ್ವತಃ ಸಂಗೀತ ಪ್ರೇಮಿ ಯಾಗಿದ್ದರಿಂದ ಅವರು ಆ ಮಜಲಿನತ್ತ ವಾಲಿ ತಬಲ, ಕೊಳಲು, ಹಾರ್ಮೋನಿಯಂ ಸೇರಿ ದಂತೆ ಹಲವು ಪ್ರಕಾರದ ಸಂಗೀತ ವಾದ್ಯಗಳನ್ನು ನುಡಿಸುವುದನ್ನು ಕಲಿತುಕೊಂಡರು. ಅಭಿನಯದ ಬಗ್ಗೆ ಆಸಕ್ತಿ ಹೊಂದಿದ್ದ ಶಂಕರ್‍ನಾಗ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ಹಿರಿಯ ನಿರ್ದೇಶಕ ಗಿರೀಶ್ ಕರ್ನಾಡ್. ಅವರು ನಿರ್ದೇಶಿಸುತ್ತಿದ್ದ `ಒಂದಾನೊಂದು ಕಾಲದಲ್ಲಿ’ ಚಿತ್ರದ ನಾಯಕನ ಹುಡುಕಾಟ ದಲ್ಲಿದ್ದಾಗಲೇ ಅವರ ಕಣ್ಣಿಗೆ ಭವಾನಿಶಂಕರ್ (ಶಂಕರ್‍ ನಾಗ್) ಬಿದ್ದಿದ್ದು. ಆ ಚಿತ್ರವು ಅವರಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ತಂದು ಕೊಟ್ಟಿತು.

ರಂಗಭೂಮಿ ಸೆಳೆತವಿದ್ದ ಶಂಕರ್‍ನಾಗ್ ವರನಟ ಡಾ.ರಾಜ್‍ಕುಮಾರ್ ನಟನೆಯ `ಒಂದು ಮುತ್ತಿನ ಕಥೆ’ ಸಿನಿಮಾವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನ ಕ್ಯಾಪ್ ಧರಿಸಿದರು. ಡಾ.ರಾಜ್‍ಕುಮಾರ್ ಅವರೊಂದಿಗೆ ಅಪೂರ್ವ ಸಂಗಮ ಚಿತ್ರದಲ್ಲೂ ಶಂಕರ್‍ನಾಗ್ ನಟಿಸಿದರು. ಶಂಕರ್‍ನಾಗ್ ನಿರ್ದೇಶಿಸಿದ ಜನ್ಮಜನ್ಮದ ಅನುಬಂಧ, ಮಿಂಚಿನ ಓಟ, ಗೀತಾ, ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂಬ ಚಿತ್ರಗಳು ಇಂದಿಗೂ ಕನ್ನಡ ಚಿತ್ರರಂಗದ ಮೇರು ಚಿತ್ರಗಳಾಗಿವೆ.

ದಿನದ 24 ಗಂಟೆಗಳಲ್ಲೂ ಸಕ್ರಿಯವಾಗಿ ರುತ್ತಿದ್ದ ನಟ, ನಿರ್ದೇಶಕ, ನಿರ್ಮಾಪಕ ಶಂಕರ್‍ನಾಗ್ ಅವರ ಕಲ್ಪನೆಯೂ ಅಪಾರ ವಾಗಿತ್ತು. ಶಂಕರ್‍ನಾಗ್‍ರ ನಿರ್ದೇಶನದ ಮೂಸೆಯಲ್ಲಿ ಮೂಡಿಬಂದಿರುವ ಮಾಲ್ಗುಡಿ ಡೇಸ್ ಧಾರಾವಾಹಿ ಇಂದಿಗೂ ಕೂಡ ಹಚ್ಚಹಸಿರಾಗಿ ಉಳಿದಿದೆ. ಶಂಕರ್‍ ನಾಗ್ ನಟಿಸಿರುವ ಸಿಬಿಐ ಶಂಕರ್, ಸಾಂಗ್ಲಿಯಾನ, ನವಜೀವನ, ಆಕ್ಸಿಡೆಂಟ್, ಮಿಂಚಿನ ಓಟ, ಗೆದ್ದ ಮಗ, ಆಟೋ ರಾಜ ಚಿತ್ರಗಳು ಇಂದಿಗೂ ಶಂಕರ್‍ರ ನೆನಪು ಮಾಡುತ್ತವೆ.

ಶಂಕರ್ ನಾಗ್ ಅವರು ನಿರ್ದೇಶಿಸಿದ್ದ ಮಿಂಚಿನ ಓಟ, ಆಕ್ಸಿಡೆಂಟ್ ಚಿತ್ರಗಳು ಅವರಿಗೆ ಪ್ರಶಸ್ತಿಗಳನ್ನು ತಂದುಕೊಟ್ಟಿವೆ. ಇವರು ನಟಿಸಿದ ಪ್ರಥಮ ಚಿತ್ರ ಒಂದಾನೊಂದು ಕಾಲದಲ್ಲಿ ಚಿತ್ರದ ನಟನೆಗಾಗಿ ಸಿಲ್ವರ್ ಪಿಕ್ ಪ್ರಶಸ್ತಿಯೂ ಒಲಿದು ಬಂದಿದೆ. ಶಂಕರ್‍ನಾಗ್ ನಿರ್ದೇಶಿ ಸಿದ್ದ ದಿ ವಾಚ್‍ಮ್ಯಾನ್ ಎಂಬ ಇಂಗ್ಲೀಷ್ ಚಿತ್ರಕ್ಕೂ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿತ್ತು.

ಇಂದು ಸಿಲಿಕಾನ್ ಸಿಟಿಯಲ್ಲಿ ತಲೆಎತ್ತಿರುವ ಮೆಟ್ರೋ ಕಲ್ಪನೆಯನ್ನು ಶಂಕರ್‍ನಾಗ್ ಅವರು ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರ ಮುಂದೆ ಇಟ್ಟಿದ್ದರು. ನಂದಿಬೆಟ್ಟಕ್ಕೆ ರೋಪ್‍ವೇ, ರಂಗಮಂದಿರ ನಿರ್ಮಾಣದ ಕಲ್ಪನೆಯೂ ಶಂಕರ್‍ನಾಗ್ ಅವರಲ್ಲಿತ್ತು.

ಸಿನಿಮಾ ಹಾಗೂ ರಾಜಕೀಯ ಲೋಕದಲ್ಲೂ ಅಪಾರ ಗೆಳೆಯರನ್ನು ಹೊಂದಿದ್ದ ಶಂಕರ್‍ ನಾಗ್ ಅವರು ಸೆಪ್ಟೆಂಬರ್ 30, 1990ರಂದು ಶೂಟಿಂಗ್ ಮುಗಿಸಿಕೊಂಡು ಬರುವ ವೇಳೆ ದಾವಣಗೆರೆಯ ಅನಗೋಡಿನಲ್ಲಿ ನಡೆದ ಕಾರಿನ ಅಪಘಾತದಲ್ಲಿ ಬಾರದ ಲೋಕಕ್ಕೆ ತೆರಳಿದರೂ ಕೂಡ ಇಂದಿಗೂ ಅವರ ನೆನಪು ಹಚ್ಚಹಸಿರಾಗಿ ಉಳಿದಿದೆ.ಶಂಕರ್‍ ನಾಗ್ ನಿಧನದ ನಂತರ ಬಿಡುಗಡೆಗೊಂಡ ಸುಂದರಕಾಂಡ ಹಾಗೂ ನಿಗೂಢ ರಹಸ್ಯ ಚಿತ್ರಗಳಿಗೆ ಮುರಳಿ ಹಾಗೂ ಅನಂತ್‍ನಾಗ್ ಅವರು ಡಬ್ಬಿಂಗ್ ನೀಡಿದ್ದರು.

#ಗಣ್ಯರ ಸ್ಮರಣೆ: 
ಕರಾಟೆ ಕಿಂಗ್ ಎಂದೇ ಖ್ಯಾತರಾಗಿದ್ದ ಶಂಕರ್‍ನಾಗ್ ಅವರ 66ನೆ ಹುಟ್ಟುಹಬ್ಬದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್‍ನಾರಾಯಣ, ಸಚಿವರಾದ ಜಗದೀಶ್‍ಶೆಟ್ಟರ್, ಬಿ.ಸಿ.ಪಾಟೀಲ್, ನಟರಾದ ಸುದೀಪ್, ಧನಂಜಯ್ ಮುಂತಾದವರು ತಮ್ಮ ಟ್ವಿಟ್ಟರ್‍ನಲ್ಲಿ ಶಂಕರ್ ನಟನೆ ಹಾಗೂ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.

Facebook Comments