ಸ್ಯಾಂಡಲ್‍ವುಡ್‍ನ ಹಿರಿಯ ನಟ ಶಂಕರ್ ರಾವ್ ವಿಧಿವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 18- ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಜನಪ್ರಿಯ ನಟರಾಗಿದ್ದ ಶಂಕರ್‍ರಾವ್ ಅವರು ಇಂದು ಬೆಳಗ್ಗೆ 6.30ರಲ್ಲಿ ಅರಕೆರೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಂಕರ್‍ರಾವ್ (84) ಅವರು ಕನ್ನಡ ಚಿತ್ರರಂಗದ ಮೇರು ನಟರುಗಳಾದ ಡಾ.ರಾಜ್‍ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಷ್, ಶ್ರೀನಾಥ್, ಶಿವರಾಜ್‍ಕುಮಾರ್, ರಮೇಶ್, ಪುನೀತ್ ಸೇರಿದಂತೆ ಹಲವಾರು ನಟರ ಚಿತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಧ್ರುವ ಚಿತ್ರದ ಲೆಕ್ಚರರ್ ಪಾತ್ರದಲ್ಲಿ ಗಮನ ಸೆಳೆದಿದ್ದ ಶಂಕರ್‍ರಾವ್ ಅವರು ಸಿದ್ಧಾರ್ಥ, ಪರಮಶಿವ, ದಿಲ್‍ವಾಲಾ, ಸಿದ್ಲಿಂಗು, ಸ್ನೇಹಿತರು, ರಾಜಕುಮಾರ, ಕನ್ನಡದ ಕಿರಣ್ ಬೇಡಿ, ಅರಸು, ವಂಶಿ, ಮಿಲನ, ಉಪ್ಪಿ ದಾದಾ ಎಂಬಿಬಿಎಸ್, ನಾಗರಹಾವು, ಕುರುಬನರಾಣಿ, ಗೆಲುವಿನ ಸರದಾರ, ಉಲ್ಟಾ ಪಲ್ಟಾ, ಬಿಸಿಬಿಸಿ,ಜೀವನಚಕ್ರ, ಬ್ಯಾಂಕರ್ ಮಾರ್ಗಯ್ಯ, ಮೂಗನ ಸೇಡು, ಮುಯ್ಯಿಗೆ ಮುಯ್ಯಿ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.

ಹಿರಿತೆರೆಯಲ್ಲದೆ ಕಿರುತೆರೆಯಲ್ಲೂ ತಮ್ಮ ನಟನೆಯ ಛಾಪನ್ನು ಮೂಡಿಸಿದ್ದ ಶಂಕರ್‍ರಾವ್ ಅವರು ಚಿದಾನಂದ್ ಹಾಗೂ ಶಾಲಿನಿ ಮುಖ್ಯ ಭೂಮಿಕೆಯಲ್ಲಿರುವ ಪಾಪಾ ಪಾಂಡು ಧಾರಾವಾಹಿಯಲ್ಲಿ ಬಾಸ್ ಬಾಲರಾಜ್ ಆಗಿ ಗಮನ ಸೆಳೆದಿದ್ದರಲ್ಲದೆ, ಸಿಲ್ಲಿ ಲಲ್ಲಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು.

ತುಮಕೂರು ಮೂಲದವರಾದ ಶಂಕರ್‍ರಾವ್ ಅವರು ಚಿಕ್ಕ ವಯಸ್ಸಿನಿಂ ದಲೇ ತೆಲುಗು ಸಿನಿಮಾಗಳನ್ನು ನೋಡುವ ಮೂಲಕ ಮುಂದೊಂದು ದಿನ ತಾನು ಕೂಡ ನಟನಾಗಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದರು. ಶಾಲಾ ದಿನಗಳಲ್ಲೇ ನಟನೆಯ ಗೀಳು ಹಚ್ಚಿಸಿಕೊಂಡ ಶಂಕರ್‍ರಾವ್ ಅವರು ನಟರಂಗ ತಂಡದೊಂದಿಗೆ ಗುರುತಿಸಿ ಕೊಂಡು ಹವ್ಯಾಸಿ ಕಲಾವಿದರಾದರು. ಶಂಕರರಾವ್‍ರ ಅಂತ್ಯಕ್ರಿಯೆಯು ಬನಶಂಕರಿ ಚಿತಾಗಾರದಲ್ಲಿ ನೆರವೇರಿದ್ದು ಚಿತ್ರರಂಗ ಹಾಗೂ ಕಿರುತೆರೆಯ ಹಲವು ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

Facebook Comments