ಶಿವಸೇನೆ-ಬಿಜೆಪಿ ಮೈತ್ರಿ ಅಂತ್ಯಗೊಳಿಸಿದ್ದು ನಾನೇ : ಶರದ್‍ಪವಾರ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.13- ಬಿಜೆಪಿಯಿಂದ ಶಿವಸೇನೆಯನ್ನು ದೂರ ಮಾಡಬೇಕು ಎಂಬ ಉದ್ದೇಶದಿಂದಲೇ ಕಳೆದ 2014ರ ಚುನಾವಣೆಯಲ್ಲಿ ನಮ್ಮ ಪಕ್ಷ ಬಿಜೆಪಿಗೆ ಹೊರಗಿನಿಂದ ಬೆಂಬಲ ನೀಡುವ ನಾಟಕವಾಡಿತ್ತು ಎನ್ನುವುದನ್ನು ಎನ್‍ಸಿಪಿ ಅಧ್ಯಕ್ಷ ಶರದ್‍ಪವಾರ್ ಒಪ್ಪಿಕೊಂಡಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಮತ್ತು ಶಿವಸೇನೆ ನಡುವೆ ಮೈತ್ರಿ ಇತ್ತು. ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿಗಾದಿ ಹಂಚಿಕೆ ವಿಚಾರದಲ್ಲಿ ಆ ಎರಡೂ ಪಕ್ಷಗಳ ನಡುವೆ ಉಂಟಾದ ವೈಮನಸ್ಸನ್ನು ಎನ್‍ಕ್ಯಾಷ್ ಮಾಡಿಕೊಳ್ಳುವ ಉದ್ದೇಶದಿಂದ ರಾಜಕೀಯ ನಾಟಕ ಆಡುವುದು ಅನಿವಾರ್ಯವಾಯಿತು ಎಂದು ಪವಾರ್ ತಿಳಿಸಿದ್ದಾರೆ.

2014ರ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ರಚನೆಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎನ್‍ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿ ಶಿವಸೇನೆಯನ್ನು ವಿರೋಧ ಪಕ್ಷದಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದರು.

ಆದರೆ, ಬಿಜೆಪಿಯ ಈ ರಾಜಕೀಯ ದೊಂಬರಾಟಕ್ಕೆ ಅಂತ್ಯ ಆಡುವ ಉದ್ದೇಶದಿಂದಲೇ ಕೇಸರಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ನಾಟಕವಾಡಿ ಅಂತಿಮವಾಗಿ ಶಿವಸೇನೆಯೊಂದಿಗೆ ಮಹಾವಿಕಾಸ್ ಅಗಾಡಿ ಮೈತ್ರಿಕೂಟ ರಚಿಸಿ ಸೇನೆ-ಎನ್‍ಸಿಪಿ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಇದೀಗ ಬಿಜೆಪಿಗೆ ಠಕ್ಕರ್ ನೀಡಿ ಮಹಾವಿಕಾಸ್ ಅಗಾಡಿ ನೇತೃತ್ವದ ಸರ್ಕಾರ ರಚನೆ ಮಾಡುವಲ್ಲಿ ತಾವು ನಿರ್ವಹಿಸಿದ್ದ ಪಾತ್ರವನ್ನು ಪವಾರ್ ಅವರು ಮಾಧ್ಯಮವೊಂದಕ್ಕೆ ಬಹಿರಂಗಗೊಳಿಸಿದ್ದಾರೆ.

Facebook Comments

Sri Raghav

Admin