ಅತ್ಯಾಚಾರ ಆರೋಪ : ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ಸಚಿವ ಸ್ಥಾನ ಅಬಾಧಿತ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜ.15- ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರ ಸಾಮಾಜಿಕ ನ್ಯಾಯ ಸಚಿವ ಧನಂಜಯ ಮುಂಡೆ ಅವರನ್ನು ಕ್ಯಾಬಿನೆಟ್‍ನಲ್ಲಿ ಮುಂದುವರಿಸಲು ಯಾವುದೇ ಬಾಧೆಯಿಲ್ಲ ಎಂದು ಎನ್‍ಸಿಪಿ ಮುಖಂಡ ಶರದ್ ಪವಾರ್ ತಿಳಿಸಿದ್ದಾರೆ. ಬೀಡ್ ಜಿಲ್ಲೆಯ ಎನ್‍ಸಿಪಿ ಮುಖಂಡ ಮತ್ತು ಸಚಿವ ಮುಂಡೆ ಅವರನ್ನು ಬಹಳ ದಿನಗಳಿಂದ ಮಹಿಳೆ ಮತ್ತು ಆಕೆಯ ಸಹೋದರಿ ಬ್ಲಾಕ್‍ಮೈಲ್ ಮಾಡುತ್ತಿದ್ದರು. ಇದೊಂದು ಗಂಭೀರ ಪ್ರಕರಣ, ಇದರ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ. ಅಲ್ಲದೆ, ಆರೋಪ ಮಾಡಿರುವ ಆಕೆ ಇತರ ಪಕ್ಷದ ಶಾಸಕರು ಹಾಗೂ ಮುಖಂಡರಿಗೂ ಸಹ ಕಿರುಕುಳ ನೀಡಿರುವ ಉದಾಹರಣೆಗಳಿವೆ.

ಆದ್ದರಿಂದ ಅತ್ಯಾಚಾರ ಆರೋಪ ಸಾಬೀತಾಗುವವರೆಗೆ ಮುಂಡೆ ಅವರು ಉದ್ಧವ್ ಠಾಕ್ರೆ ನೇತೃತ್ವದ ಸಂಪುಟದಲ್ಲಿ ಮಂತ್ರಿಯಾಗಿ ಮುಂದುವರಿಯುವುದರಲ್ಲಿ ಯಾವುದೇ ತೊಡಕಿಲ್ಲ ಎಂದಿದ್ದಾರೆ. ಎನ್‍ಸಿಪಿ ವರಿಷ್ಠ ಶರದ್ ಪವಾರ್ ಸೇರಿದಂತೆ ಮಹಾರಾಷ್ಟ್ರ ಅಘಾಡಿ ಸಂಪುಟದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಹಾಗೂ ಹಿರಿಯ ನಾಯಕ ಪ್ರಫುಲ್ ಪಟೇಲ್ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಪಟೇಲ್ ಅವರ ಸ್ವಗೃಹದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ಶಿವಸೇನ ನೇತೃತ್ವದ ಎಂವಿಎ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಸಚಿವ ಮುಂಡೆ (45) ಅವರ ಮೇಲೆ ಮಾಡಿರುವ ಅತ್ಯಾಚಾರ ಆರೋಪ ಪೂರ್ವ ನಿರ್ಧರಿತ ಹಾಗೂ ಯೋಜಿತ ಕ್ರಮ. ಆದ್ದರಿಂದ ಅವರನ್ನು ಸಂಪುಟದಿಂದ ಕೈಬಿಡಲು ಸಾಧ್ಯವಿಲ್ಲ ಎಂದಿದ್ದಾರೆ.

ಎಂಎನ್‍ಎಸ್ ರಾಜಕಾರಣಿ, ಬಿಜೆಪಿ ಶಾಸಕ ಹಾಗೂ ಇತರರು ಕೂಡ ಇದೇ ಮಹಿಳೆಯಿಂದ ಕಿರುಕುಳ ಅನುಭವಿಸಿದ್ದಾರೆ. ರಾಜಕಾರಣಿಗಳನ್ನು ಬಲಿಪಶು ಮಾಡುವುದು ಈಕೆಯ ಹವ್ಯಾಸ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಹಾಗೂ ಕಟ್ಟುನಿಟ್ಟಿನ ತನಿಖೆ ನಡೆಸಲಿ. ಮುಂಡೆ ಅವರ ಮೇಲಿನ ಆರೋಪ ರುಜುವಾತಾಗುವವರೆಗೆ ಅವರು ತಮ್ಮ ಪದವಿಯಲ್ಲಿ ಮುಂದುವರಿಯಲಿ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Facebook Comments