ಶಾರ್ದೂಲ್ ಠಾಕೂರ್ ಮೇಲೆ ಬಿಸಿಸಿಐ ಕೆಂಗಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮೇ 25- ಕೊರೊನಾ ಸೋಂಕಿನ ಹಿನ್ನೆಲೆಯ ನಡುವೆಯೂ ಕೇಂದ್ರ ಸರ್ಕಾರ ಕ್ರೀಡಾ ಚಟುವಟಿಕೆಗಳಿಗೆ ಗ್ರೀನ್‍ಸಿಗ್ನಲ್ ನೀಡಿದ ನಡುವೆಯೇ ಭಾರತದ ವೇಗಿ ಶಾರ್ದೂಲ್ ಠಾಕೂರ್ ಅಭ್ಯಾಸದಲ್ಲಿ ನಿರತರಾಗಿರುವುದು ಬಿಸಿಸಿಐನ ಕಣ್ಣು ಕೆಂಪಾಗಿಸಿದೆ.

ಮೋದಿ ಸರ್ಕಾರ 4.0 ಲಾಕ್‍ಡೌನ್‍ನಲ್ಲಿ ಕೆಲವು ಮಾರ್ಗಸೂಚಿಗಳಿಗೆ ಅನುಮತಿ ನೀಡಿತ್ತಾದರೂ ಬಿಸಿಸಿಐ ಇನ್ನೂ ಯಾವುದೇ ಆಟಗಾರರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಪ್ಪಿಗೆ ನೀಡಿರಲಿಲ್ಲ.

ಆದ್ದರಿಂದಲೇ ಟೀಂ ಇಂಡಿಯಾದ ನಾಯಕ ವಿರಾಟ್‍ಕೊಹ್ಲಿ, ಉಪನಾಯಕ ರೋಹಿತ್‍ಶರ್ಮಾ ಸೇರಿದಂತೆ ಭಾರತ ತಂಡದ ಇತರ ಆಟಗಾರರು ಇನ್ನೂ ಪ್ರಾಕ್ಟೀಸ್‍ನಲ್ಲಿ ತೊಡಗಿಸಿಕೊಳ್ಳಲು ಮುಂದಾಗಿಲ್ಲ. ಬಿಸಿಸಿಐನ ನಿಯಮದ ಪ್ರಕಾರ ಗುತ್ತಿಗೆ ಪಡೆದಿರುವ ಆಟಗಾರರು ಪ್ರಾಕ್ಟೀಸ್ ಮಾಡುವ ಮುನ್ನ ಬೋರ್ಡ್‍ನ ಅನುಮತಿಯನ್ನು ಪಡೆಯಲೇಬೇಕು.

ಠಾಕೂರ್ ಕೂಡ ಈಗ ಗುತ್ತಿಗೆ ಆಟಗಾರನಾಗಿದ್ದಾರೆ, ಆದರೆ ಶಾರ್ದೂಲ್ ಇತ್ತೀಚೆಗೆ ಬೋರ್ಡ್‍ನ ಅನುಮತಿ ಪಡೆಯದೇ ಮೈದಾನದವೊಂದರಲ್ಲಿ ಎಂದಿನಂತೆ ಪ್ರಾಕ್ಟೀಸ್‍ನಲ್ಲಿ ತೊಡಗಿಕೊಂಡಿರುವುದು ಸರಿಯಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಕೆಂಡಕಾರಿದ್ದಾರೆ.

ಕೇಂದ್ರ ಸರ್ಕಾರವು ಕೆಲವು ಷರತ್ತುಬದ್ಧ ನಿಯಮಗಳನ್ನು ಪಾಲಿಸುವುದರೊಂದಿಗೆ ಕ್ರೀಡಾ ಕೂಟಗಳನ್ನು ಆರಂಭಿಸಬಹುದು ಎಂದು ಹೇಳಿರುವುದರಿಂದ ಈಗ ಬಿಸಿಸಿಐಯು ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ನಡೆಸಲು ಒಪ್ಪಿಗೆ ನೀಡಿದೆಯಾದರೂ ದಿನಾಂಕವನ್ನು ಪ್ರಕಟಿಸಿಲ್ಲ.

Facebook Comments