ಕಾರು ಅಪಘಾತ ಪ್ರಕರಣ : ನಟಿ ಶರ್ಮಿಳಾ ಮಾಂಡ್ರೆಗೆ ಕ್ಲೀನ್ ಚಿಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.30- ಅಪಘಾತವಾದ ವೇಳೆ ನಾನು ಕಾರು ಚಾಲನೆ ಮಾಡುತ್ತಿರಲಿಲ್ಲ ಎಂಬ ಹೇಳಿಕೆಯನ್ನು ಪರಿಗಣಿಸಿ ಬೆಂಗಳೂರು ಪೊಲೀಸರು ನಟಿ ಶರ್ಮಿಳಾ ಮಾಂಡ್ರೆಯನ್ನು ದೋಷಾರೋಪಣಾ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ.

ಲಾಕ್‍ಡೌನ್ ಸಂದರ್ಭದಲ್ಲಿ ಜನಸಾಮಾನ್ಯರು ಮನೆಯಿಂದ ಹೊರ ಬಂದರೆ ಲಾಠಿ ಬೀಸಿ ದಂಡಿಸುತ್ತಿದ್ದ ಪೆÇಲೀಸರು, ಅದೇ ವೇಳೆ ಮಧ್ಯರಾತ್ರಿ ಐಶರಾಮಿ ಕಾರು ಅಪಘಾತ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಪ್ರಕರಣದಿಂದ ಕೈಬಿಟ್ಟಿದ್ದಾರೆ. ಡಾನ್ ಥಾಮಸ್ ಎಂಬುವವರನ್ನು ಮಾತ್ರ ಆರೋಪಿ ಎಂದು ಗುರುತಿಸಲಾಗಿದೆ.

# ಪ್ರಕರಣದ ವಿವರ:
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶಾದ್ಯಂತ ಬಿಗಿಯಾದ ಲಾಕ್‍ಡೌನ್ ಘೋಷಣೆ ಮಾಡಿದ್ದರು. ಯಾರೂ ಮನೆಯಿಂದ ಹೊರ ಬರಬಾರದು ಎಂದು ಕಟ್ಟಪ್ಪಣೆ ಹೊರಡಿಸಲಾಗಿತ್ತು. ಒಂದು ವೇಳೆ ಯಾರಾದರೂ ಹೊರಗೆ ಬಂದರೆ ಪ್ರಕೃತಿ ವಿಕೋಪ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತಿತ್ತು.

ಅಷ್ಟು ಬಿಗಿಯಾದ ಕಾನೂನು ಜಾರಿಯಲ್ಲಿದ್ದಾಗಲೂ ಏಪ್ರಿಲ್ 4ರಂದು ಮುಂಜಾನೆ 3.45ರ ಸುಮಾರಿನಲ್ಲಿ ಡಾನ್ ಥಾಮಸ್, ನಟಿ ಶರ್ಮಿಳಾ ಮಾಂಡ್ರೆ, ಶಿಫಾ ಜೋಹರ್, ಲೋಕೇಶ್‍ಕುಮಾರ್, ನಿಖಿಲ್ ಅವರಿದ್ದ ಕಾರು ಅಪಘಾತವಾಗಿತ್ತು. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಕಾರನ್ನು ಸ್ಥಳದಲ್ಲೇ ಬಿಟ್ಟು ಚಿಕಿತ್ಸೆಗಾಗಿ ಪೋರ್ಟಿಸ್ ಆಸ್ಪತ್ರೆಗೆ ತೆರಳಿದ್ದರು.

ಅಪಘಾತ ಪ್ರಕರಣದ ಬೆನ್ನು ಹತ್ತಿ ಪೊಲೀಸರು ಬರುತ್ತಿರುವ ಮಾಹಿತಿ ತಿಳಿದು ಗಾಯಾಳುಗಳು ನಾಪತ್ತೆಯಾಗಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಯಶವಂತಪುರದ ಸ್ಪರ್ಷ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದರು.

ಶರ್ಮಿಳಾ ಮಾಂಡ್ರೆ ಅಲ್ಲಿಂದಲೂ ನಾಪತ್ತೆಯಾಗಿ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದರು. ಗಾಯಗೊಂಡಿದ್ದ ಶರ್ಮಿಳಾರ ಹೇಳಿಕೆ ದಾಖಲಿಸಿಕೊಳ್ಳಲು ವೈದ್ಯರು ಅವಕಾಶ ನೀಡಿರಲಿಲ್ಲ.

ಕೊನೆಗೆ ಪೊಲೀಸರಿಗೆ ಹೇಳಿಕೆ ನೀಡಿರುವ ಶರ್ಮಿಳಾ ತುರ್ತಾಗಿ ಅಗತ್ಯವಿದ್ದ ಔಷ ತರುವ ಸಲುವಾಗಿ ಹೋಗುವಾಗ ಕಾರು ಅಪಘಾತವಾಗಿತ್ತು. ಆದರೆ ಕಾರನ್ನು ನಾನು ಚಾಲನೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನು ಆಧರಿಸಿ ತನಿಖಾ ವರದಿಯಲ್ಲಿ ಶರ್ಮಿಳಾ ಮಾಂಡ್ರೆ ಮತ್ತು ಇತರ ಮೂವರ ಹೆಸರನ್ನು ಕೈ ಬಿಡಲಾಗಿದೆ.

ಐಷಾರಾಮಿ ಕಾರಿನಲ್ಲಿ ಔಷಧ ತರಲು ಐದು ಮಂದಿ ಒಮ್ಮೆಲೆ ಹೋಗುತ್ತಿದ್ದರಾ, ಕಾರು ಅಪಘಾತವಾದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡದೆ ನಾಪತ್ತೆಯಾಗಿದ್ದು ಯಾಕೆ, ಅನಂತರ ಮಾದಕ ವಸ್ತು ಸೇವನೆಯ ಬಗ್ಗೆ ಪರೀಕ್ಷೆ ನಡೆಸಲು ರಕ್ತದ ಮಾದರಿ ಪಡೆದುಕೊಳ್ಳಲು ಪ್ರಯತ್ನಿಸಿದಾಗ
ಕೈಗೆ ಸಿಗದೆ ಕಾಲಹರಣ ಮಾಡಿದ್ದೇಕೆ ಎಂಬ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ.

ಬಿಸಿಬಿಸಿ ಚರ್ಚೆಗೆ ಕಾರಣವಾಗಿದ್ದ ಪ್ರಕರಣವೊಂದು ಸದ್ದಿಲ್ಲದೆ ಮುಕ್ತಾಯಗೊಳ್ಳುತ್ತಿದೆ. ತನಿಖಾ ವರದಿ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ.

Facebook Comments

Sri Raghav

Admin