ಸಚಿವ ಸ್ಥಾನದಿಂದ ಶಶಿಕಲಾ ಜೊಲ್ಲೆಗೆ ಕೋಕ್..?!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.11- ನಿರೀಕ್ಷೆಗೆ ತಕ್ಕಂತೆ ಇಲಾಖೆಯಲ್ಲಿ ಪ್ರಗತಿ ಸಾಸಲು ವಿಫಲರಾಗಿರುವ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸಂಪುಟದಿಂದ ಕೋಕ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರಾಗಿರುವ ಶಶಿಕಲಾ ಜೊಲ್ಲೆ ಅಕಾರ ಸ್ವೀಕರಿಸಿ ಒಂದು ವರ್ಷವಾದರೂ ಇಲಾಖೆಯಲ್ಲಿ ಯಾವುದೇ ಸುಧಾರಣೆ ಮಾಡದಿರುವುದೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ಯಾವುದೇ ಸಂದರ್ಭದಲ್ಲಿ ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆ ಮಾಡುವ ಸಂಭವವಿದ್ದು, ಶಶಿಕಲಾ ಜೊಲ್ಲೆ ಸಂಪುಟದಿಂದ ಕೋಕ್ ಸಿಕ್ಕರೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ಮಾಜಿ ಸಚಿವ ದಿವಂಗತ ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾ ಅವರಿಗೆ ಅದೃಷ್ಟ ಒಲಿದರೂ ಅಚ್ಚರಿ ಇಲ್ಲ.

ತಮ್ಮನ್ನು ಸಂಪುಟದಿಂದ ಕೈಬಿಡಬಹುದೆಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಜೊಲ್ಲೆ ಅವರು ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಪ್ರಯತ್ನ ನಡೆಸಿದ್ದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಸಚಿವರಾದ ನಿತಿನ್ ಗಡ್ಕರಿ, ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ ಮತ್ತಿತರನ್ನು ಭೇಟಿಯಾಗಿ ಸಂಪುಟದಿಂದ ಕೈಬಿಡದಂತೆ ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು.

ಆದರೆ ಅವರ ಈ ಪ್ರಯತ್ನಕ್ಕೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂದು ದೆಹಲಿಯಿಂದ ಬರಿಗೈಯಲ್ಲಿ ಹಿಂತಿರುಗಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅತ್ಯಂತ ಪ್ರಮುಖ ಇಲಾಖೆಯಾಗಿದ್ದು, ಪ್ರಮುಖವಾಗಿ ಕಾರ್ಯಕರ್ತರು ಹಾಗೂ ಮಹಿಳೆಯರ ನಡುವೆ ಕೊಂಡಿ ಬೆಸೆಯುವ ಇಲಾಖೆಯಾಗಿದೆ. ಮಹಿಳೆಯರು, ವಿದ್ಯಾರ್ಥಿನಿಯರ ಸಮಸ್ಯೆ ಗಳಿಗೆ ಸ್ಪಂದಿಸುವ ಮೂಲಕ ತಮ್ಮ ಇಲಾಖೆಯಿಂದ ಏನೇನು ಮಾಡಬಹುದೆಂಬುದನ್ನು ತೋರಿಸ ಬಹುದಿತ್ತು.

ಆದರೆ ಜೊಲ್ಲೆ ಅವರು ಇಂತಹ ಯಾವುದೇ ಕಾರ್ಯಕ್ರಮಗಳನ್ನಾಗಲಿ, ಚಟುವಟಿಕೆಗಳನ್ನು ನಡೆಸಲಿಲ್ಲ. ಮೊದಲ ಬಾರಿಗೆ ಸಚಿವರಾಗಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ನೀಡಲಾಗಿತ್ತು. ಆ ಜಿಲ್ಲೆಗೂ ಕೂಡ ಭೇಟಿಯನ್ನೇ ಕೊಡಲಿಲ್ಲ.

ಪ್ರವಾಹದ ಸಂದರ್ಭದಲ್ಲಿ ಸಚಿವರಾಗಿ ತಮ್ಮ ಕರ್ತವ್ಯ ಏನೆಂಬುದನ್ನು ತೋರಿಸುವಲ್ಲಿ ವಿಫಲರಾದರು. ಇಡೀ ಜಿಲ್ಲೆಯಲ್ಲಿ ಜನರು ಮನೆಮಠ, ಜಾನುವಾರುಗಳು, ಆಸ್ತಿಪಾಸ್ತಿ, ಬೆಳೆ ಕಳೆದುಕೊಂಡು ನಿರಾಶ್ರಿತರಾಗಿದ್ದ ಸಂದರ್ಭದಲ್ಲೂ ಇತ್ತ ಸುಳಿಯಲೇ ಇಲ್ಲ.

ಎಲ್ಲಾ ಸಚಿವರು ಕಡ್ಡಾಯವಾಗಿ ಕಚೇರಿ ಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಕುಂದು ಕೊರತೆಗಳನ್ನು ಆಲಿಸಬೇಕೆಂದು ಪಕ್ಷ ಕಟ್ಟುನಿಟ್ಟಿನ ಸೂಚನೆ ಕೊಟ್ಟಿತ್ತು. ಸಚಿವರಾದ ನಂತರ ಜೊಲ್ಲೆ ಪಕ್ಷದ ಕಚೇರಿಯತ್ತಲೇ ಮುಖ ಮಾಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಹೀಗೆ ಎಲ್ಲಾ ಹಂತದಲ್ಲೂ ವಿಫಲರಾಗಿರುವ ಕಾರಣ ಸಂಪುಟದಿಂದ ಕೈಬಿಡಲಿದ್ದಾರೆ ಎಂಬ ವದಂತಿ ಬಲವಾಗಿ ಕೇಳಿಬರುತ್ತಿದೆ. ಹೊಡೆಯಲಿದೆಯೇ ಜಾಕ್‍ಪಾಕ್?: ಶಶಿಕಲಾ ಜೊಲ್ಲೆ ಸಂಪುಟದಿಂದ ಕೋಕ್ ಪಡೆದರೆ ಮಹಿಳಾ ಕೋಟಾದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಚಿವರಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಕಳೆದ ಬಾರಿಯೇ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಕೂಗು ಕೇಳಿಬಂದಿತ್ತು. ಕೊನೆ ಕ್ಷಣದಲ್ಲಿ ಜೊಲ್ಲೆಗೆ ಅದೃಷ್ಟ ಕೈ ಹಿಡಿದಿದ್ದರಿಂದ ಕೂದೆಳೆ ಅಂತರದಲ್ಲಿ ಪೂರ್ಣಿಮಾ ಶ್ರೀನಿವಾಸ್‍ಗೆ ಸಚಿವ ಸ್ಥಾನ ಕೈ ತಪ್ಪಿತ್ತು.
ಪ್ರಮುಖವಾಗಿ ಚಿತ್ರದುರ್ಗ, ತುಮಕೂರು ಹಾಗೂ ಬಳ್ಳಾರಿ ಸೇರಿದಂತೆ ಮತ್ತಿತರ ಕಡೆ ಯಾದವ ಸಮುದಾಯದ ಮತಗಳು ಪ್ರಮುಖವಾಗಿವೆ.

ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಪಕ್ಷದ ಸಂಘಟನೆಗೆ ಆನೆಬಲ ಬರಲಿದೆ ಎಂಬ ಲೆಕ್ಕಾಚಾರ ಹೈಕಮಾಂಡ್‍ನದ್ದಾಗಿದೆ.
ಹೀಗಾಗಿ ಜೊಲ್ಲೆಯನ್ನು ಸಂಪುಟದಿಂದ ಕೈಬಿಟ್ಟು ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮಣೆ ಹಾಕಿದರೆ ಅಚ್ಚರಿ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

Facebook Comments

Sri Raghav

Admin