ಭಾರತ ವಿರುದ್ಧ ಘೋಷಣೆ ಕೂಗಿದ ಪಾಕಿಗಳಿಗೆ ಶಾಜಿಯಾ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್ (ದಕ್ಷಿಣ ಕೊರಿಯಾ), ಆ.19- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ ಆರ್ಟಿಕಲ್ 370 ರದ್ದು ಬಳಿಕ ಪಾಕಿಸ್ತಾನಿಗಳು ವಿವಿಧೆಡೆ ಕಿರಿಕಿರಿ ಮಾಡುತ್ತಿರುವ ಪ್ರಸಂಗಗಳು ವರದಿಯಾಗುತ್ತಿವೆ.

ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್‍ನಲ್ಲಿ ಪ್ರತಿಭಟನೆ ವೇಳೆ ಪಾಕಿಸ್ತಾನದ ಕೆಲ ಪ್ರಜೆಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.

ಆಗ ಅಲ್ಲಿಗೆ ಧಾವಿಸಿದ ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಮೋದಿ ವಿರುದ್ಧ ಘೋಷಣೆ ಕೂಗದಂತೆ ಖಡಕ್ ಎಚ್ಚರಿಕೆ ನೀಡಿದರಲ್ಲದೆ ಇಂಡಿಯಾ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿರುವ ವಿಡಿಯೋ ಇದೀಗ ವೈರಲ್ ಆಗಿದ್ದು , ಶಾಜಿಯಾ ಅವರ ದೇಶಭಕ್ತಿಗೆ ಪ್ರಶಂಸೆಗಳು ವ್ಯಕ್ತವಾಗಿವೆ.

ಶಾಜಿಯಾ ಇಲ್ಮಿ ಗ್ಲೋಬಲ್ ಸಿಟಿಜನ್ ಪೋರಂ ನಿಯೋಗ ದೊಂದಿಗೆ ಯುನೈಟೆಡ್ ಫೀಸ್ ಫೆಡರೇಶನ್ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಸಮ್ಮೇಳನ ಮುಗಿಸಿಕೊಂಡು ಭಾರತದ ರಾಯಭಾರಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಕೆಲ ಪಾಕಿಗಳು ಶಾಜಿಯಾ ಹಾಗೂ ಇತರ ಭಾರತೀಯರನ್ನು ಸುತ್ತುವರೆದರು.

ಈ ವೇಳೆ ಪಾಕಿಗಳನ್ನು ತರಾಟೆಗೆ ತೆಗೆದುಕೊಂಡ ಶಾಜಿಯಾ, ಮತ್ತೊಂದು ದೇಶದ ನೆಲದಲ್ಲಿ ನಿಂತು ಇನ್ನೊಂದು ದೇಶ ಹಾಗೂ ಅದರ ನಾಯಕರ ವಿರುದ್ಧ ಘೋಷಣೆ ಕೂಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಆಗ ಅಲ್ಲಿದ್ದ ಪಾಕಿಗಳು ಜೋರಾಗಿ ಭಾರತದ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದರು. ಆಗ ಶಾಜಿಯಾ ಏಕಾಂಗಿಯಾಗಿ ಪಾಕ್ ಪ್ರಜೆಗಳ ವಿರುದ್ಧ ದಿಟ್ಟ ಹೇಳಿಕೆ ನೀಡಿ ಇಂಡಿಯಾ ಜಿಂದಾಬಾದ್ ಎಂದು ಘೋಷಣೆ ಕೂಗಿದರು.

Facebook Comments

Sri Raghav

Admin