ಸಕಲ ಸರ್ಕಾರಿ ಗೌರವದೊಂದಿಗೆ ಶೀಲಾ ದೀಕ್ಷಿತ್ ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.21- ನಿನ್ನೆ ಹಠಾತ್ ನಿಧನರಾದ ದೆಹಲಿ ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲೆ ಮತ್ತು ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್(81) ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ರಾಜಧಾನಿ ದೆಹಲಿಯ ನಿಗಮ್ ಬೋಧ್ ಘಾಟ್‍ನಲ್ಲಿ ನೆರವೇರಿತು.

ದೆಹಲಿಯ ಅತ್ಯಂತ ಪ್ರಾಚೀನ ರುದ್ರಭೂಮಿಯಲ್ಲಿ ದಿವಂಗತ ಶೀಲಾ ದೀಕ್ಷಿತ್ ಅವರ ಪುತ್ರ ಮತ್ತು ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದರು.

ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ರಾಹುಲ್‍ಗಾಂಧಿ, ಗುಲಾಂ ನಬಿ ಅಜಾದ್ ಸೇರಿದಂತೆ ಪಕ್ಷದ ಅನೇಕ ನಾಯಕರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಸೇರಿದಂತೆ ವಿವಿಧ ಪಕ್ಷಗಳ ಧುರೀಣರು, ಹಲವರು ಕ್ಷೇತ್ರಗಳ ಖ್ಯಾತನಾಮರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಶೀಲಾ ದೀಕ್ಷಿತ್ ಅವರಗೆ ಅಂತಿಮ ಗೌರವ ಸಲ್ಲಿಸಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ಧೀಮಂತ ನಾಯಕಿಯ ಪಾರ್ಥಿವ ಶರೀರವನ್ನು ದೆಹಲಿಯ ನಿಜಾಮುದ್ಧೀನ್ ಪ್ರದೇಶದ ಅವರ ನಿವಾಸದಿಂದ ಕಾಂಗ್ರೆಸ್ ಕೇಂದ್ರ ಕಚೇರಿಗೆ ಮೆರೆವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಅಲ್ಲಿ ಮಧ್ಯಾಹ್ನ 12.15ರಿಂದ ಮಧ್ಯಾಹ್ನ 1.30ರವರೆಗೆ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ಅವರ ಕಳೇಬರವನ್ನು ಪುಷ್ಪಾಂಕೃತ ವಾಹನದ ಮೂಲಕ ನಿಗಮ್ ಬೋಧ್ ಘಾಟ್‍ಗೆ ಒಯ್ಯಲಾಯಿತು.

ಅಲ್ಲಿ ಅಂತ್ಯಕ್ರಿಯೆ ಪೂರ್ವ ವಿಧಿ ವಿಧಾನಗಳನ್ನು ಸಂದೀಪ್ ದೀಕ್ಷಿತ್ ನೆರವೇರಿಸಿದರು. ಪ್ರಧಾಯಿಕ ರೀತಿಯಲ್ಲಿ ಚಿತೆಯಲ್ಲಿರಿಸಿ ಅಗ್ನಿ ಸ್ಪರ್ಶ ಮಾಡುವ ಬದಲು ಒತ್ತಡದ ನೈಸರ್ಗಿಕ ಅನಿಲ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್-ಸಿಎನ್‍ಜಿ) ಯಂತ್ರದ ಮೂಲಕ ಪಾರ್ಥಿವ ಶರೀರವನ್ನು ದಹನ ಮಾಡಲಾಯಿತು.

ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ (15 ವರ್ಷಗಳು) ಶೀಲಾ ದೀಕ್ಚಿತ್ ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅತ್ಯಂತ ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದ ಭಾರತ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಕಾಂಗ್ರೆಸ್ ಮನೆ ಮಗಳು ಎಂದೇ ಪಕ್ಷದ ವಲಯದಲ್ಲಿ ಜನಪ್ರಿಯರಾಗಿದ್ದ ಅವರು ಆರು ತಿಂಗಳ ಕಾಲ ಕೇರಳ ರಾಜ್ಯಪಾಲರಾಗಿದ್ದರು. ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಬಲವರ್ಧನೆಗೊಳಿಸಿದ್ದರು.

ಶೀಲಾ ದೀಕ್ಷಿತ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಡಾ. ಎಂ.ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂಪುಟ ಸಚಿವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ವಿವಿಧ ರಾಜ್ಯಗಲ ಸಿಎಂಗಳೂ, ಮತ್ತು ವಿವಿಧ ಕ್ಷೇತ್ರಗಳ ಖ್ಯಾತನಾಮರು ಸಂತಾಪ ಸೂಚಿಸಿ ಶೀಲಾ ದೀಕ್ಷಿತ್ ಗುಣಗಾನ ಮಾಡಿದ್ದಾರೆ.

 

Facebook Comments

Sri Raghav

Admin